ಬೆಂಗಳೂರು: ಸ್ಥಳ, ನೀರು, ಸಂಪರ್ಕ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ಅನುಕೂಲಗಳನ್ನು ನೋಡಿಕೊಂಡು ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕಿದೆ. ಈ ಕಾರಣಕ್ಕೆ ಎಂಟು ಸ್ಥಳಗಳನ್ನು ಗುರುತಿಸಲಾಗಿದೆ” ಎಂದು ತಿಳಿಸಿದರು.
ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ಕುರಿತು ವಿಧಾನಸೌಧದಲ್ಲಿ ಸೋಮವಾರ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ನಂತರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಡಿಸಿಎಂ ಅವರು “ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮೂರನೇ ಅತಿದೊಡ್ಡ ನಿಲ್ದಾಣವಾಗಿದೆ. ಮುಂಬೈ, ದೆಹಲಿ ಬಿಟ್ಟರೇ ದಕ್ಷಿಣ ಭಾರತದಲ್ಲೇ ದೊಡ್ಡ ನಿಲ್ದಾಣವಾಗಿದ್ದು 70 ಮಿಲಿಯನ್ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ 110 ಮಿಲಿಯನ್ ಗೆ ತಲುಪುತ್ತದೆ ಎಂದು ಅಂದಾಜಿಸಲಾಗಿದೆ” ಎಂದರು.
ಕೆಂಪೇಗೌಡ ಅಂತರರಾಷ್ಟ್ರೀಯ ನಿಲ್ದಾಣವನ್ನು ಪಿಪಿಪಿ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿತ್ತು. ಹೊಸ ನಿಲ್ದಾಣವನ್ನು ಇದೇ ರೀತಿ ನಿರ್ಮಾಣ ಮಾಡಲಾಗುವುದು. ಇದರಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳ ಪಾಲೂ ಇರುತ್ತದೆ. ಮೂಲಸೌಕರ್ಯ ವ್ಯವಸ್ಥೆ ನೋಡಿ ಜಾಗಕ್ಕೆ ಹಸಿರು ನಿಶಾನೆ ನೀಡಲಾಗುತ್ತದೆ. ಸಚಿವರಾದ ಎಂ.ಬಿ.ಪಾಟೀಲರು ಅತ್ಯಂತ ಅಚ್ಚುಕಟ್ಟಾಗಿ ಯೋಜನೆ ಸಿದ್ದಪಡಿಸಿಕೊಂಡಿದ್ದಾರೆ. ತಾಂತ್ರಿಕ ವರದಿಗಳು ಸಹ ಬಂದಿದ್ದು ಇವುಗಳನ್ನು ಮುಖ್ಯಮಂತ್ರಿಗಳ ಬಳಿ ಚರ್ಚೆ ಮಾಡಲಾಗುವುದು. ನಂತರ ದೆಹಲಿಗೆ ಕಳುಹಿಸಲಾಗುವುದು” ಎಂದು ಹೇಳಿದರು.
ಅಂತಿಮವಾಗಿ ಕೇಂದ್ರ ಸರ್ಕಾರವೇ ಅನುಮತಿ ನೀಡಬೇಕು. ಕೇಂದ್ರ ತಂಡ ಸಾಧಕ- ಭಾದಕಗಳನ್ನು ಗಮನಿಸಿ ಹಾಗೂ ತಾಂತ್ರಿಕ ಅಂಶಗಳನ್ನು ಪರಿಶೀಲಿಸಿ, ಯಾವ ಜಾಗದಲ್ಲಿ ವಿಮಾನ ನಿಲ್ದಾಣ ಬಂದರೆ ಒಳ್ಳೆಯದು, ಬೆಂಗಳೂರಿಗೆ ಹೇಗೆ ಅನುಕೂಲವಾಗುತ್ತದೆ ಎಂಬುದನ್ನು ನೋಡಿ ತೀರ್ಮಾನ ಮಾಡುತ್ತಾರೆ” ಎಂದು ತಿಳಿಸಿದರು.
ಗ್ರೇಟರ್ ಬೆಂಗಳೂರು ಭಾಗದಲ್ಲಿ ವಿಮಾನ ನಿಲ್ಧಾಣ ಬರುತ್ತದೆಯೇ ಎಂದಾಗ “ಇದು ಕರ್ನಾಟಕಕ್ಕೆ ಅನುಕೂಲವಾಗಲು ಮಾಡುತ್ತಿರುವುದು. ನಿಮ್ಮ ಬೆಂಗಳೂರಿನಲ್ಲಿ ನಿರ್ಮಾಣವಾಗಲಿದೆ” ಎಂದು ತಿಳಿಸಿದರು.
ವಿಮಾನ ನಿಲ್ದಾಣ ನಿರ್ಮಾಣದ ಕಾಲಾವಧಿಯ ಬಗ್ಗೆ ಕೇಳಿದಾಗ “ಕೇಂದ್ರದಿಂದ ಅನುಮತಿ ನೀಡಿದ ತಕ್ಷಣ ಕೆಲಸ ಪ್ರಾರಂಭಿಸಲಾಗುವುದು. 2035 ರ ವೇಳೆಗೆ ಕಾರ್ಯಾಚರಣೆ ಮಾಡುವಂತೆ ನಿರ್ಮಾಣ ಮಾಡಲಾಗುವುದು. ಈ ಮೊದಲು ಎಚ್ ಎಎಲ್ ಹಾಗೂ ಮೈಸೂರಿನಲ್ಲಿ ನಿರ್ಮಾಣ ಮಾಡಲು ಅವಕಾಶ ನೀಡಲಿಲ್ಲ. ಸಮಯಕ್ಕಾಗಿ ಕಾಯುತ್ತಿದ್ದೆವು. ಬೇರೆ ರಾಜ್ಯಗಳು ಈ ಸಂದರ್ಭವನ್ನು ಬಳಸಿಕೊಳ್ಳಬಾರದು ಎಂದು ನಾವು ವೇಗವಾಗಿ ಕೆಲಸ ಮಾಡುತ್ತಿದ್ದೇವೆ” ಎಂದರು.
150 ಕಿ.ಮೀ ವ್ಯಾಪ್ತಿಯಲ್ಲಿ ಎರಡೆರಡು ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡಬಾರದು ಎನ್ನುವ ನಿಯಮವಿತ್ತು. ಈ ನಿಯಮ 2032- 33 ಕ್ಕೆ ಮುಗಿಯಲಿದೆ. ಪ್ರಸ್ತುತ ಎರಡು ರನ್ ವೇಗಳನ್ನು 4 ಸಾವಿರ ಎಕರೆ ಭೂಮಿ ಸ್ವಾಧೀನ ಪಡಿಸಿಕೊಂಡು ನಿರ್ಮಾಣ ಮಾಡಲಾಗಿತ್ತು. ಎರಡು ರನ್ ವೇ ಗಳು ಭವಿಷ್ಯದಲ್ಲಿ ಸಾಲುವುದಿಲ್ಲ. ಬೆಂಗಳೂರು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಈ ಕಾರಣಕ್ಕೆ ಕೇವಲ ಒಂದು ವಿಮಾನ ನಿಲ್ದಾಣ ಸಾಕಾಗುವುದಿಲ್ಲ. ಸಚಿವರಾದ ಎಂಬಿ.ಪಾಟೀಲ್ ಅವರ ನೇತೃತ್ವದಲ್ಲಿ ಹತ್ತಾರು ಸಭೆಗಳು ನಡೆಸಲಾಗಿದೆ. ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಒಂದಷ್ಟು ನಿಯಮಗಳಿಗೆ ಆದ ಕಾರಣಕ್ಕೆ ಈಗಲೇ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.