ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಬಾದ್ ಷಾ ಬರ್ತಡೇ ಅಂಗವಾಗಿ ಬಹುನಿರೀಕ್ಷಿತ ಸಿನಿಮಾ ಬಿಲ್ಲ ರಂಗ ಭಾಷಾ ಟೈಟಲ್ ಲೋಗೋ ಹಾಗೂ ಕಾನ್ಸೆಪ್ಟ್ ವಿಡಿಯೋ ಝಲಕ್ ನ್ನು ಅಭಿಮಾನಿಗಳಿಗೆ ಉಡುಗೊರೆಯಾಗಿ ನೀಡಲಾಗಿದೆ. ನಿರೀಕ್ಷೆಗೆ ತಕ್ಕಂತೆ ಮೂಡಿಬಂದಿರುವ ಫಸ್ಟ್ ಝಲಕ್ ನಲ್ಲಿ ನಾನಾ ವಿಷಯಗಳನ್ನು ಅನೂಪ್ ಭಂಡಾರಿ ಕಟ್ಟಿಕೊಟ್ಟಿದ್ದಾರೆ. ಲಿಬರ್ಟಿ ಪ್ರತಿಮೆ, ಐಫೆಲ್ ಟವರ್ ಮತ್ತು ತಾಜ್ ಮಹಲ್ ನ್ನು ಬಿಲ್ಲ ರಂಗ ಭಾಷಾ ಗ್ಲಿಂಪ್ಸ್ ನಲ್ಲಿ ತೋರಿಸಿರುವ ಅವರು ಭವಿಷ್ಯದ ಕಥೆ ಹೇಳೋದಿಕ್ಕೆ ಹೊರಟ್ಟಿದ್ದಾರೆ. Once Upon A Time in 2209 AD ಎಂದು ಶುರುವಾಗುವ ಝಲಕ್ ಬಹಳ ಕುತೂಹಲ ಹೆಚ್ಚಿಸಿದ್ದು, ಬಿಲ್ಲ ರಂಗ ಭಾಷಾ ಫಸ್ಟ್ ಬ್ಲಂಡ್ ಏನಿರಬಹುದು ? ಅನೂಪ್ ಹೇಳೋದಿಕ್ಕೆ ಹೊರಟಿರುವ ಭವಿಷ್ಯದ ಕಥಾಹಂದರ ಏನು? ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ
ಸುದೀಪ್ ಅವರೇ ಹೇಳಿಕೊಂಡಿರುವಂತೆ ಅವರ ಸಿನಿಕರಿಯರ್ ನ ಬಹುದೊಡ್ಡ ಬಜೆಟ್ ಚಿತ್ರ ಇದಾಗಿದೆ. ಟಾಲಿವುಡ್ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಹನುಮಾನ್ ನಿರ್ಮಾಪಕರಾದ ನಿರಂಜನ್ ರೆಡ್ಡಿ ಹಾಗೂ ಚೈತನ್ಯ ರೆಡ್ಡಿ ಬಿಲ್ಲ ರಂಗ ಭಾಷಾ ಚಿತ್ರಕ್ಕೆ ಹಣ ಹಾಕುತ್ತಿದ್ದಾರೆ. ತಮ್ಮದೇ ಪ್ರೈಮ್ ಶೋ ಎಂಟರ್ ಟೈನ್ಮೆಂಟ್ ಬ್ಯಾನರ್ ನಡಿ ಈ ಚಿತ್ರವನ್ನು ಅವರು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಅಭಿಮಾನಿಗಳು “ಅಪ್‌ಡೇಟ್ ಬೇಕು ಬಾಸ್” ಎಂದು ಹೇಳುತ್ತಿದ್ದಾರೆ. “ಬಾಸ್ ಅಪ್‌ಡೇಟ್ ಬಾಸ್” “ಅಪ್‌ಡೇಟ್ ಬೇಕು ಬಾಸ್” ಎಂದೆಲ್ಲ ಧ್ವನಿ ಕೇಳುತ್ತಾರೆ. ತಕ್ಷಣ ವಿಡಿಯೋದಲ್ಲಿ ಅನೂಪ್ ಭಂಡಾರಿ ಅವರು ಪುಸ್ತಕ ಓದುವಂತೆ ಆ ಪುಸ್ತಕದಲ್ಲಿ ಬಿಲ್ಲಾ ರಂಗ ಭಾಷಾದ ಟೀಮ್ ಕುರಿತು ವಿವರವೂ ದೊರಕುತ್ತದೆ. “ಹನುಮಾನ್ ನಿರ್ಮಾಪಕರಿಂದ, ರಂಗಿತರಂಗ, ರಾಜರಥ ವಿಕ್ರಾಂತ್ ರೋಣ ನಿರ್ದೇಶಕರಿಂದ ಬಿಲ್ಲಾ ರಂಗ ಭಾಷಾ ಸಿನಿಮಾ” ಎಂಬ ಅಪ್‌ಡೇಟ್ ಅನ್ನು ಹಂಚಿಕೊಳ್ಳಲಾಗಿದೆ.
ಬಿಲ್ಲ ರಂಗ ಭಾಷಾ ಸಿನಿಮಾ ಬಗ್ಗೆ ಮಾತನಾಡಿರುವ ನಿರ್ದೇಶಕ ಅನೂಪ್ ಭಂಡಾರಿ, ವಿಕ್ರಾಂತ್ ರೋಣ ಸಿನಿಮಾ ನಂತರ ಹನುಮಾನ್ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸದ ಸಮಯದಲ್ಲಿ ನಿರ್ಮಾಪಕರಾದ ನಿರಂಜನ್ ರೆಡ್ಡಿ ನನ್ನನ್ನು ಭೇಟಿಯಾದರು. ನಾನು ಸುದೀಪ್ ಸರ್ ಗೆ ಸಿನಿಮಾ ಮಾಡುತ್ತಿರುವುದಾಗಿ ಹಾಗೂ ಬಿಲ್ಲ ರಂಗ ಭಾಷಾ ಕಥೆ ಹೇಳಿದಾಗ ಅವರು ಎಕ್ಸೈಟ್ ಆದರು. ಅದ್ಧೂರಿಯಾಗಿ ಚಿತ್ರ ನಿರ್ಮಾಣ ಮಾಡುವುದಾಗಿ ತಿಳಿಸಿದರು. ಸುದೀಪ್ ಸರ್ ಜೊತೆ ಕೆಲಸ ಮಾಡುವುದು ಅದ್ಭುತ ಅನುಭವವಾಗಿದೆ. ಜನ ವಿಕ್ರಾಂತ್ ರೋಣ ಚಿತ್ರ ಇಷ್ಟಪಟ್ಟಿದ್ದಾರೆ. ಸುದೀಪ್ ಸರ್ ಈ ಚಿತ್ರವನ್ನು ದೊಡ್ಡ ಚಿತ್ರ ಎಂದಿರುವುದು ನನಗೆ ಜವಾಬ್ದಾರಿಯನ್ನು ಜಾಸ್ತಿ ಮಾಡಿದೆ ಎಂದರು.
ನಿರ್ಮಾಪಕರಾದ ನಿರಂಜನ್ ರೆಡ್ಡಿ ಮಾತನಾಡಿ, ಸುದೀಪ್ ಸರ್ ಜೊತೆ ಅನೂಪ್ ಕೈ ಜೋಡಿಸಿದ್ದಾರೆ ಎಂದಾಗ ನಾವು ಉತ್ಸುಕರಾದೆವು. ತೆಲುಗಿನಲ್ಲಿ ವಿಕ್ರಾಂತ್ ರೋಣ ಅದ್ಭುತ ಯಶಸ್ಸು ಕಂಡಿದೆ. ಬಿಲ್ಲ ರಂಗ ಭಾಷಾ ಕಥೆ ಕೇಳಿದಾಗ ನಾವೇ ಚಿತ್ರ ನಿರ್ಮಾಣ ಮಾಡಬೇಕು ಎಂದುಕೊಂಡೆವು. ಕಿಚ್ಚ ಸುದೀಪ್ ಸರ್ ಜೊತೆ ಕೈ ಜೋಡಿಸಿರುವುದು ಒಂದೊಳ್ಳೆ ಅವಕಾಶವಾಗಿದ್ದು, ಬಿಲ್ಲ ರಂಗ ಭಾಷಾ ಸಿನಿಮಾ ಮೂಲಕ ಪ್ರೇಕ್ಷಕರಿಗೆ ಅದ್ಭುತ ಪ್ರಪಂಚ ಪರಿಚಯಿಸುತ್ತೇವೆ ಎಂದರು.
ಬಿಲ್ಲ ರಂಗ ಭಾಷಾ ಬಹುಭಾಷಾಯಲ್ಲಿ ನಿರ್ಮಾಣವಾಗುತ್ತಿದ್ದು, ಶೀಘ್ರದಲ್ಲೇ ಶೂಟಿಂಗ್ ಅಖಾಡಕ್ಕೆ ಇಳಿಯಲಿದೆ ಚಿತ್ರತಂಡ