ಹುಬ್ಬಳ್ಳಿ: ಮುಡಾ ವಿಚಾರದಲ್ಲಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿಲ್ಲ ಎಂದು ರಾಜ್ಯಪಾಲರು ನಮ್ಮೆಲ್ಲ ಶಾಸಕರ ಮುಂದೆ ಪ್ರಸ್ತಾಪಿಸಿದ್ದಾರೆ. ಈ ವಿಚಾರದಲ್ಲಿ ಬಿಜೆಪಿಯವರ ಒತ್ತಡಕ್ಕೆ ಮಣಿದು ಈ ಕ್ರಮಕ್ಕೆ ಮುಂದಾಗಿರುವುದು ಸ್ವತಃ ಅವರಿಗೂ ಮುಜುಗರ ತಂದಿದೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶನಿವಾರ ನಮ್ಮ ಪಕ್ಷದ ಶಾಸಕರು, ಸಂಸದರು ರಾಜ್ಯಪಾಲರನ್ನು ಭೇಟಿಯಾದ ಸಂದರ್ಭದಲ್ಲಿ ರಾಜ್ಯಪಾಲರು ನಮ್ಮ ಸಮ್ಮುಖದಲ್ಲಿ ಮಾತನಾಡಿದ್ದು, ಸಿದ್ದರಾಮಯ್ಯ ವಿರುದ್ಧ ನಾನು ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟಿಲ್ಲ ಎಂಬುವುದನ್ನು ಹೇಳಿದ್ದಾರೆ. ಈ ವಿಚಾರದಲ್ಲಿ ರಾಜ್ಯಪಾಲರಿಗೆ ಮುಜುಗರ ಆಗಿದ್ದು, ಅವರಿಗೆ ಪಾಪ ಪ್ರಜ್ಞೆ ಕಾಡುತ್ತಿದೆ. ಅಂದಿನ ಅವರ ಪರಿಸ್ಥಿತಿ ನೋಡಿದರೆ ಬಿಜೆಪಿ ನಾಯಕರು ಒತ್ತಡ ಹೇರಿ ಕೊಡಿಸಿದ್ದಾರೆ ಎಂಬುವುದು ಸ್ಪಷ್ಟ. ರಾಜಭವನ ಬಿಜೆಪಿ ಕಚೇರಿಯಾಗಿರುವುದು ಸ್ಪಷ್ಟ ಎಂದರು.
ಮುಡಾ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರ ಏನಿಲ್ಲ. ಅವಧಿ ಪೂರ್ಣ ಇವರೇ ಮುಖ್ಯಮಂತ್ರಿಯಾಗಿ ಇರುತ್ತಾರೆ. ಮುಂದಿನ ಅವಧಿಗೂ ಕಾಂಗ್ರೆಸ್ ಅಧಿಕಾರದಲ್ಲಿ ಇರುತ್ತದೆ. ಯಾರಿಂದಲೂ ಕೆಳಗಿಳಿಸಲು ಸಾಧ್ಯವಿಲ್ಲ. ಆರ್.ವಿ.ದೇಶಪಾಂಡೆ ಹಿರಿಯ ನಾಯಕರು ಅವರು ಹೇಳಿರುವುದರಲ್ಲಿ ತಪ್ಪೇನಿದೆ. ಎಲ್ಲರಿಗೂ ಮುಖ್ಯಮಂತ್ರಿ ಆಗಬೇಕು ಎನ್ನುವ ಆಸೆ ಇರುತ್ತದೆ. ಆದರೆ ಕೊಡುವುದು ಬಿಡುವುದು ಪಕ್ಷದ ಹೈಕಮಾಂಡ್ ನಿರ್ಧಾರ. ಆದರೆ ಯಾರೇ ಮುಖ್ಯಮಂತ್ರಿ ಆಗಬೇಕಾದರೆ ಖುರ್ಚಿ ಖಾಲಿಯಿಲ್ಲ. ಆ ಖುರ್ಚಿ ಖಾಲಿ ಮಾಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿದರು.