ಹುಬ್ಬಳ್ಳಿ: ಗುರುವಾರ ಸಾಯಂಕಾಲ ಹುಬ್ಬಳ್ಳಿಯ ಅಮರಗೋಳ ಎಪಿಎಂಸಿಯಲ್ಲಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಬ್ಯಾಂಕಿನ ಹಣವನ್ನು ಸುಲಿಗೆ ಮಾಡುವ ಉದ್ದೇಶದಿಂದ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕೈಯಲ್ಲಿ ಚಾಕು ಹಿಡಿದುಕೊಂಡು ಬ್ಯಾಂಕ್ ನೌಕರರೊಬ್ಬರ ಕುತ್ತಿಗೆಗೆ ಚಾಕು ಹಿಡಿದು, ಪ್ರಾಣ ಬೆದರಿಕೆ ಒಡ್ಡಿ ’10 ಲಕ್ಷ ರೂ ಹಣ ಕೊಡಿ’ ಎಂದು ಹೇಳುತ್ತಾ ಕ್ಯಾಶ್ ಕೌಂಟರ್ ಹತ್ರ ಬಂದಿದ್ದು, ನೌಕರನ ರಕ್ಷಣೆಗೆ ಬಂದವರನ್ನು ತಳ್ಳಿ ಆರೋಪಿಯು ಬ್ಯಾಂಕ್ ನಿಂದ ಓಡಿಹೋಗಿದ್ದು, ಈ ಕುರಿತು ಎಪಿಎಂಸಿ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಎಪಿಎಂಸಿ ಪೊಲೀಸ್ ಠಾಣೆಯ ಪಿಐ ಸಮಿವುಲ್ಲಾ ಕೆ ಮತ್ತುವರ ಸಿಬ್ಬಂದಿಗಳನ್ನು ಒಳಗೊಂಡ ತಂಡವು ಬ್ಯಾಂಕ್ ಸಿಬ್ಬಂದಿಗಳ ಸಹಾಯದಿಂದ ತಕ್ಷಣ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಘಟನೆ ನಡೆದ 5 ಗಂಟೆಯೊಳಗೆ
ಬ್ಯಾಂಕ್ ದರೋಡೆಗೆ ಯತ್ನಿಸಿದ ಆರೋಪಿ ಗೋಪನಕೊಪ್ಪ ನಿವಾಸಿಯಾದ ಮಂಜುನಾಥ್ ಹಬೀಬ್ (28 ವರ್ಷ ) ಎಂಬಾತನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದು, ದರೋಡೆಗೆ ಬಳಸಿದ್ದ ಎರಡು ಚಾಕು, ಬ್ಯಾಗ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ವಿಚಾರಣೆ ಕಾಲಕ್ಕೆ ಆರೋಪಿಯು ಷೇರು ಮಾರುಕಟ್ಟೆಯಲ್ಲಿ ಹಣವನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರಿಂದ ಈ ದರೋಡೆ ಕೃತ್ಯಕ್ಕೆ ಮುಂದಾಗಿದ್ದರ ಬಗ್ಗೆ ತಿಳಿದು ಬಂದಿದ್ದು, ಆರೋಪಿಯ ವಿರುದ್ಧ ಸೂಕ್ತ ಕಾನೂನು ಜರುಗಿಸಲಾಗಿದೆ.