PRIYANK KHARGE: ಮಣಿಕಂಠ ರಾಥೋಡ್ ಆಡಿಯೋ ಬಿಡುಗಡೆ ಮಾಡಿದ ಪ್ರಿಯಾಂಕ್ ಖರ್ಗೆ

ಬೆಂಗಳೂರು : ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಲಬುರಗಿ ಚಲೋ ಹೋರಾಟದ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಆಡಿಯೋವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಬಿಡುಗಡೆ ಮಾಡಿದರು.

ಬೆಂಗಳೂರಿನಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೀವ ಬೆದರಿಕೆ ಹಾಕಿರುವ ಆಡಿಯೋ ಬಗ್ಗೆ ದೂರು ಕೊಟ್ಟರೂ ಕ್ರಮ ಆಗಿಲ್ಲ. ರಾಠೋಡ್ ವಿರುದ್ಧ
20-30 ಕೇಸ್ ಇದ್ದರೂ ಕ್ರಮ ಆಗಿಲ್ಲ. ಇದೀಗ ಅವರ ನೇತೃತ್ವದಲ್ಲಿ ಬಿಜೆಪಿ ಕಲಬುರಗಿ ಚಲೋ ಹಮ್ಮಿಕೊಂಡಿದೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿಗರಿಗೆ ನಾಚಿಕೆ ಆಗಲ್ವಾ? ಈ ಪ್ರಕರಣಕ್ಕೆ ನನಗೆ ಸಂಬಂಧ ಇಲ್ಲ. ಹಾಗಿದ್ದರೂ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಬಿಜೆಪಿಗರು ಹತಾಶರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಗುತ್ತಿಗೆದಾರರ ಸಂತೋಷ್ ಪಾಟೀಲ್ ಅವರು ನನ್ನ ಸಾವಿಗೆ ನೇರ ಕಾರಣ ಕೆ.ಎಸ್ ಈಶ್ವರಪ್ಪ ಎಂದಿದ್ದರು. ಅವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಸಂತೋಷ್ ಪಾಟೀಲ್ ತಮ್ಮ ಡೆತ್ ನೋಟ್ ನಲ್ಲಿ ಉಲ್ಲೇಖ ಮಾಡಿದ್ದರು. ಅಲ್ಲದೆ, ಹೆಂಡತಿ ಮಕ್ಕಳಿಗೆ ಪರಿಹಾರ ಕೊಡಬೇಕು ಎಂದು ಡೆತ್ ನೋಟ್ ನಲ್ಲಿ ಹೇಳಿದ್ದರು ಎಂದು ಸಂತೋಷ್ ಪಾಟೀಲ್ ಡೆತ್ ನೋಟ್ ನಲ್ಲಿದ್ದ ಅಂಶಗಳನ್ನು ಪ್ರಿಯಾಂಕ್ ಖರ್ಗೆ ಓದಿದರು.

ಆದರೆ ಸಂತೋಷ್ ಪಾಟೀಲ್ ಕುಟುಂಬಕ್ಕೆ ಬಿಜೆಪಿಗರು ಸಹಾಯ ಮಾಡಿದ್ದಾರಾ? ಸಂತೋಷ್ ಪಾಟೀಲ್ ಕುಟುಂಬವನ್ನು ಏಕೆ ಭೇಟಿ ಮಾಡಿಲ್ಲ? ಕೇವಲ ಮೊಸಲೆ ಕಣ್ಣೀರು ಸುರಿಸುತ್ತಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.

ಬಿಜೆಪಿಗರು ಸುಳ್ಳಿನ ಶೂರರು

ಬಿಜೆಪಿ ನಾಯಕರಾದ ಸಿಟಿ ರವಿ, ಛಲವಾದಿ, ಪಿ ರಾಜೀವ್ ಸುಳ್ಳು ಆರೋಪ ಮಾಡಿದ್ದಾರೆ. ಅವರೀಗ
ಸುಳ್ಳಿನ ಶೂರರಾಗಿದ್ದಾರೆ.‌ಇವರ ವಿರುದ್ಧ ಮಾನನಷ್ಟ ಮೊಕದ್ದಮೆ ಈ ಹಿಂದೆಯೇ ಹಾಕಿದ್ದೆ. ಸುಳ್ಳು ಬಿಜೆಪಿಯ ಬಂಡವಾಳ ಆಗಿದೆ. ರಾಜಕೀಯ ಅಸ್ಥಿತ್ವ ಕಾಂಗ್ರೆಸ್ ನಾಯಕರ ಜಪ ಮಾಡುತ್ತಿದ್ದಾರೆ ಎಂದರು.

ಹಿಟ್ ಆಂಡ್ ರನ್ ಮಾಡುವಲ್ಲಿ ಬಿಜೆಪಿಗರು ಪಿಎಚ್ ಡಿ ತೆಗೆದುಕೊಂಡಿದ್ದಾರೆ ಎಂದ ಅವರು,
ಯಾರನ್ನು ಕ್ಯಾಬಿನೆಟ್ ನಲ್ಲಿ ಇಟ್ಟುಕೊಳ್ಳುವುದು ಬಿಡುವುದು ಸಿಎಂ ವಿವೇಚನೆ ಎಂದು ತಿರುಗೇಟು ನೀಡಿದರು‌.

ಮುನಿರತ್ನ ವಿರುದ್ಧ ಚಾರ್ಜ್ ಶೀಟ್ ಫೈಲ್ ಆಗಿದೆ. ಮುನಿರತ್ನ ರಾಜೀನಾಮೆ ಏಕೆ ಕೇಳಲ್ಲ. ನಿಮಗೂ ಎಚ್ ಐ ವಿ ಸೋಂಕು ಚುಚ್ಚುತ್ತಾರೆಂಬ ಭಯವೇ?ಎಂದು ಪ್ರಶ್ನಿಸಿದರು.

ಛಲವಾದಿ ಸಕಾರಾತ್ಮಕವಾಗಿ ಟೀಕೆ ಮಾಡಿದರೆ ನಾನು ಪ್ರತಿಕ್ರಿಯೆ ನೀಡಬಹುದು. ವೈಯಕ್ತಿಕವಾಗಿ ಟೀಕೆ ಮಾಡಿದರೆ ಹೇಗೆ. ಮಣಿಕಂಠ ರಾಠೋಡ್ ಕೊಲೆ ಬೆದರಿಕೆ ಬಗ್ಗೆ ಉತ್ತರ ಕೊಡಿ ಎಂದು ಸವಾಲು ಹಾಕಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು, ಕೇಂದ್ರ ಸಚಿವ ಅಮಿತ್ ಶಾ ಭೇಟಿ ಸಂದರ್ಭದಲ್ಲಿ ನನ್ನ ವಿಚಾರವಾಗಿಯೂ ಚರ್ಚೆ ಆಗಿದೆ. ಬಿಜೆಪಿಗರು ಕಲಬುರಗಿ ಬಂದರೆ ಎಳನೀರು, ಮಜ್ಜಿಗೆ ಕೊಡುತ್ತೇವೆ. ಬಿಜೆಪಿಯವರನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಹುಡುಗರಿಗೆ ಸೂಚನೆ ನೀಡಿದ್ದೇನೆ ಎಂದು ವ್ಯಂಗ್ಯವಾಗಿ ತಿರುಗೇಟು ನೀಡಿದರು.

ಕುಟುಂಬ ರಾಜಕಾರಣ ನಮ್ಮಲ್ಲಿ ಇದ್ಯಾ ಬಿಜೆಪಿಯಲ್ಲಿ ಇದ್ಯಾ?ಇವರಿಗೆಲ್ಲಾ ಡಿಎನ್ ಎ ಟೆಸ್ಟ್ ಉಚಿತವಾಗಿ ಮಾಡಿಸಲು ನಾನು ರೆಡಿ ಇದ್ದೇನೆ. ಬೇರೆ ಏನಾದರೂ ಇರಬಹುದು ಎಂದು ಅವರಿಗೆ ಭಯ ಇರಬಹುದೇನು?ಬ್ಯಾಟ್ ಹಿಡಿಯಲು ಬಾರದವರಿಗೆ ಐಸಿಸಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಆದರೆ ನಾನು ಮಲ್ಲಿಕಾರ್ಜುನ ಖರ್ಗೆ ಮಗ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ. ನಾನು ಎಲೆಕ್ಟೆಡ್, ಸೆಲೆಕ್ಟೆಡ್ ಅಲ್ಲ ಎಂದು ಕುಟುಂಬ ರಾಜಕಾರಣ ಆರೋಪಕ್ಕೆ ತಿರುಗೇಟು ನೀಡಿದರು.

More News