ಭೀಮರಾವ್ ಅವರ ನಿರ್ದೇಶನದ ಹೆಬ್ಬುಲಿ ಕಟ್ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಅನ್ನು ನಟ ಸತೀಶ್ ನೀನಾಸಂ ಅವರು ಬಿಡುಗಡೆ ಮಾಡಿ ಹೊಸ ವರ್ಷಕ್ಕೆ ಕನ್ನಡ ಪ್ರೇಕ್ಷಕರಿಗೆ ಕೊಡುಗೆ ನೀಡಿದ್ದಾರೆ. ನಟ ಸತೀಶ್ ನೀನಾಸಂ ಅವರು ತಮ್ಮ ಬ್ಯಾನರ್ ಅಡಿ ಹೆಬ್ಬುಲಿ ಕಟ್ ಚಿತ್ರವನ್ನು ಅರ್ಪಿಸುತ್ತಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹೆಬ್ಬುಲಿ ಕಟ್ ಸಿನಿಮಾದ ಪೋಸ್ಟರ್ ಹಂಚಿಕೊಂಡಿದ್ದಾರೆ.
“ನಗಿಸುತ್ತಲೇ ಕಣ್ಣೀರಾಗಿಸೋ ಈ ಕಥೆ ಪ್ರತಿಯೊಬ್ಬರ ಕನ್ನಡಿ” ಎಂದು ಬರೆದುಕೊಳ್ಳುವ ಮೂಲಕ ಕಥೆಯ ಅಂತರಂಗದ ಸುಳಿವು ನೀಡಿದ್ದಾರೆ. ನಟ ಸತೀಶ್ ನೀನಾಸಂ ಅವರ ಸತೀಶ್ ಪಿಕ್ಚರ್ ಹೌಸ್ ಪ್ರಸ್ತುತಿಯ ಹೆಬ್ಬುಲಿ ಕಟ್ ಸಿನಿಮಾ ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ಬಿಡುಗಡೆಗೆ ಸಿದ್ಧವಾಗಿದೆ.
ನನ್ನ ಹೃದಯಕ್ಕೆ ಅತ್ಯಂತ ಹತ್ತಿರಾಗಿರುವ ‘ಹೆಬ್ಬುಲಿ ಕಟ್’ ಚಿತ್ರವನ್ನು ನಾಡಿನ ಜನತೆಗೆ ಅರ್ಪಿಸಲು ಅತ್ಯಂತ ಖುಷಿ ಮತ್ತು ಹೆಮ್ಮೆಯಿದೆ. ಭೀಮರಾವ್ ಪಿ ಅವರ ನಿರ್ದೇಶನದ ಈ ಚಿತ್ರ ನನ್ನ ಕಡೆಯಿಂದ ಕನ್ನಡಿಗರಿಗೆ ಹೊಸ ವರ್ಷದ ಕಾಣಿಕೆ ಮತ್ತು ಬದ್ಧತೆ ಎಂದು ಹೇಳಿಕೊಂಡಿದ್ದರು.
ಅತ್ಯಂತ ಖುಷಿ ಮತ್ತು ಹೆಮ್ಮೆಯಿಂದ ‘ಹೆಬ್ಬುಲಿ ಕಟ್’ ಎಂಬ ಹೊಸ ಕನ್ನಡ ಚಿತ್ರವನ್ನು ನಾನು ನಿಮಗೆ ಅರ್ಪಿಸುತ್ತಿದ್ದೇನೆ. ಶುದ್ಧ ಹಾಸ್ಯ ಮತ್ತು ಪರಿಶುದ್ಧ ಪ್ರೀತಿಯ ಮಿಶ್ರಣವಾಗಿರುವ ಈ ಭಾವನಾತ್ಮಕ ಕಥೆ ನಿಮ್ಮ ತುಟಿಯಂಚಲ್ಲಿ ನಗು, ಕಣ್ಣಂಚಲ್ಲಿ ಒಂದು ಹನಿ ನೀರು ತರಿಸುತ್ತದೆ ಎಂಬ ಭರವಸೆ ವ್ಯಕ್ತಪಡಿಸಿದ್ದರು.
ಸಾಮಾಜಿಕ ಅಸಮಾನತೆಯ ತಳಹದಿಯಲ್ಲಿ ಪ್ರೀತಿ, ದ್ವೇಷ ಮತ್ತು ಸಂಬಂಧಗಳನ್ನು ಅನ್ವೇಷಿಸುವ ಪ್ರಾಮಾಣಿಕ ಪ್ರಯತ್ನವೇ ಈ ‘ಹೆಬ್ಬುಲಿ ಕಟ್’. ಪ್ರತಿಭಾನ್ವಿತ ತಾರಾಗಣ, ಸುಂದರ ಛಾಯಾಗ್ರಹಣ, ಮರೆಯಲಾಗದ ಸಂಗೀತದ ಸಮ್ಮಿಲನವಾಗಿರುವ ಹೆಬ್ಬುಲಿ ಕಟ್ ನಿಮ್ಮನ್ನು ಭಾವನಾತ್ಮಕ ಪಯಣವೊಂದರಲ್ಲಿ ಭಾಗಿಯಾಗಿಸುತ್ತದೆ ಎಂದು ಖಚಿತವಾಗಿ ಹೇಳಬಲ್ಲೆ. ಒಬ್ಬ ಶಾಲಾ ಹುಡುಗನ ಮುಗ್ಧತೆ ನಿಮ್ಮಲ್ಲಿ ಮುಗುಳ್ನಗು ಹುಟ್ಟಿಸಿದರೆ ಅವನಿರುವ ಸಮಾಜದ ವರ್ತನೆ ನಿಮ್ಮ ಗಂಟಲು ಬಿಗಿಯಾಗಿಸುತ್ತದೆ. ‘ಹೆಬ್ಬುಲಿ ಕಟ್’ ಅನ್ನು ಸ್ವಾಗತಿಸಿ, ಪ್ರೀತಿಯಿಂದ ಅಪ್ಪಿಕೊಳ್ಳಿ ಎಂದು ನಾಡಿನ ಜನತೆಗೆ ಮನವಿ ಮಾಡಿದ್ದಾರೆ.
ದೀಪಕ್ ಯರಗೇರಾ ಅವರು ಕ್ಯಾಮರಾ ಕಣ್ಣಲ್ಲಿ ದೃಶ್ಯಕಾವ್ಯ ಸೆರೆಹಿಡಿದಿದ್ದಾರೆ. ನವನೀತ್ ಶ್ಯಾಮ್ ಸಂಗೀತ, ಅನಂತ್ ಶಾಂದ್ರೇಯ ಚಿತ್ರಕಥೆಯ ಜೊತೆ ಭೀಮರಾವ್, ಎನ್.ಅಭಿ ಸಿಂಧನೂರು ಅವರ ಸಂಭಾಷಣೆಯಲ್ಲಿ ಸಾಥ್ ನೀಡಿದ್ದಾರೆ. ಮೌನೇಶ್ ನಟರಂಗ ನಟನಾಗಿ, ಅನನ್ಯ ನಿಹಾರಿಕಾ ನಟಿಯಾಗಿ, ಸಹನಟರಾದ ಮಹದೇವ ಹಡಪದ, ಉಮಾ ವೈ.ಜಿ., ಡಿಂಗ್ರಿ ನರೇಶ್,ಹಾಸ್ಯ ನಟ ಮಹಾಂತೇಶ್ ಹಿರೇಮಠ, ತೆಲುಗು ನಟ ವಿನಯ್ ಮಹಾದೇವನ್ ಖಳನಟರಾಗಿ ಅಭಿನಯಿಸಿದ್ದಾರೆ.