MLA Chandru Lamani Driver Suicide: ಶಾಸಕ ಡಾ. ಚಂದ್ರು ಲಮಾಣಿ ಕಾರಿನ ಚಾಲಕ ಆತ್ಮಹತ್ಯೆ

ಗದಗ: ಜಿಲ್ಲೆಯ ಶಿರಹಟ್ಟಿ ಮತಕ್ಷೇತ್ರದ ಶಾಸಕ ಡಾ.ಚಂದ್ರು ಲಮಾಣಿ ಅವರ ಕಾರು ಚಾಲಕ ಸುನೀಲ ಜಯಪ್ಪ ಚವ್ಹಾಣ (೨೫) ಶುಕ್ರವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಲಕ್ಷ್ಮೇಶ್ವರ ಪಟ್ಟಣದ ಹುಬ್ಬಳ್ಳಿ ರಸ್ತೆಯ ಮಲ್ಲಾಡದ ಕಾಲನಿಯಲ್ಲಿ ಶಾಸಕ ಡಾ.ಚಂದ್ರು ಲಮಾಣಿ ಅವರು ಇತ್ತೀಚಿಗೆ ಖರೀದಿಸಿದ್ದರೆನ್ನಲಾದ ಮನೆಯಲ್ಲಿ ಘಟನೆ ನಡೆದಿದೆ. ದಿಂಡೂರ ಗ್ರಾಮದ ಶಾಸಕರ ಸಂಬಂಧಿಯು ಆಗಿದ್ದ ಸುನೀಲ ಕಳೆದ ಎರಡ್ಮೂರು ವರ್ಷಗಳಿಂದ ಇವರ ಹತ್ತಿರ ಕಾರ್ ಚಾಲಕನಾಗಿ ಕೆಲಸ ಮಾಡುತ್ತಿದ್ದನು.

ಶಾಸಕರು ಗುರುವಾರವೇ ಬೆಂಗಳೂರಿಗೆ ಹೋಗಿದ್ದರಿಂದ ಚಾಲಕ ರಾತ್ರಿ ಊಟ ಮಾಡಿ ಮನೆಯಲ್ಲಿ ಒಬ್ಬನೇ ಮಲಗಿದ್ದಾನೆ. ಶುಕ್ರವಾರ ಬೆಳಿಗ್ಗೆ ಹೊತ್ತಾದರೂ ಬಾಗಿಲು ತೆರೆದಿರಲಿಲ್ಲ ಮತ್ತು ಪೋನ್ ಕರೆಯನ್ನೂ ಸ್ವೀಕರಿಸಲಿಲ್ಲ. ಅನುಮಾನಗೊಂಡು ನೋಡಿದಾಗ ನೇಣು ಹಾಕಿಕೊಂಡು ಮೃತಪಟ್ಟಿರುವ ಬಗ್ಗೆ ತಿಳಿದು ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಿಪಿಐ ನಾಗರಾಜ ಮಾಡಳ್ಳಿ ಮತ್ತು ಪಿಎಸ್‌ಐ ನಾಗರಾಜ ಗಡದ ಪರಿಶೀಲನೆ ಬಳಿಕ ಮೃತದೇಹ ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಕಳುಹಿಸಿದ್ದಾರೆ.

ವಿಷಯದ ತಿಳಿದು ಆಸ್ಪತ್ರೆಗೆ ಆಗಮಿಸಿದ ಮೃತನ ಕೆಲ ಸಂಬಂಧಿಕರು ಸುನೀಲ ಆತ್ಮಹತ್ಯೆ ಮಾಡಿಕೊಳ್ಳಲು ಮೇಲ್ನೋಟಕ್ಕೆ ಯಾವುದೇ ಬಲವಾದ ಕಾರಣಗಳಿರಲಿಲ್ಲ. ತಂದೆ-ತಾಯಿ ಎಲ್ಲ ಸಂಬಂಧಿಕರು ನಾವೆಲ್ಲ ಬರುವವರೆಗೂ ಕಾಯದೇ ಆಸ್ಪತ್ರೆಗೆ ಮೃತದೇಹ ಸ್ಥಳಾಂತರಿಸಿರುವುದು ನಮಗೆಲ್ಲ ನೋವುಂಟು ಮಾಡಿದೆ. ನಮಗೇನೂ ತಿಳಿಯದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕರು ಸಂಜೆ ಬೆಂಗಳೂರಿನಿಂದ ಲಕ್ಷ್ಮೇಶ್ವರಕ್ಕೆ ಆಗಮಿಸಿದ ಬಳಿಕ ಅಂತ್ಯ ಸಂಸ್ಕಾರಕ್ಕೆ ದಿಂಡೂರ ತಾಂಡಾಕ್ಕೆ ಮೃತದೇಹ ಕಳುಹಿಸಲಾಯಿತು.

ಸಾವಿನ ಬಗ್ಗೆ ಲಕ್ಷ್ಮೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರೆದಿದೆ.

More News

You cannot copy content of this page