ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ ಆರೋಪಿ ನಟಿ ರನ್ಯಾ ರಾವ್ ಗೆ ಶಿಷ್ಟಾಚಾರ ಸೌಲಭ್ಯ ನೀಡಿರುವುದನ್ನು ಸಂಬಂಧ ತನಿಖೆ ನಡೆಸಲು ಗೌರವ ಗುಪ್ತರನ್ನು ತನಿಖಾಧಿಕಾರಿಯಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶಿಷ್ಟಾಚಾರ ಸೌಲಭ್ಯಗಳು ದುರ್ಬಳಕೆಯಾಗಿರುವ ಬಗ್ಗೆ ತನಿಖೆ ನಡೆಸುವ ಸಂಬಂಧ ಹಿರಿಯ ಐಎಎಸ್ ಅಧಿಕಾರಿ ಗೌರವ್ ಗುಪ್ತರನ್ನು ನೇಮಿಸಲಾಗಿದೆ. ಶಿಷ್ಟಾಚಾರ ಸೌಲಭ್ಯಗಳ ಬಳಕೆಯನ್ನು ಪಡೆದುಕೊಳ್ಳಲು ಕಾರಣವಾದ ಅಂಶಗಳು ಹಾಗೂ ಸಂದರ್ಭಗಳು ಮತ್ತು ಈ ಪ್ರಕರಣದಲ್ಲಿ ರಾಜ್ಯ ಐ.ಪಿ.ಎಸ್ ಅಧಿಕಾರಿ ರಾಮಚಂದ್ರ ರಾವ್ ಪಾತ್ರದ ಬಗ್ಗೆ ತನಿಖೆ ನಡೆಸಲು ಸೂಚಿಸಲಾಗಿದೆ. ತನಿಖಾಧಿಕಾರಿಗಳು ತನಿಖೆಯನ್ನು ತಕ್ಷಣ ಪ್ರಾರಂಭಿಸಿ, ತನಿಖಾ ವರದಿಯನ್ನು ಒಂದು ವಾರದೊಳಗೆ ಸಲ್ಲಿಸುವಂತೆ ನಿರ್ದೇಶನ ನೀಡಲಾಗಿದೆ.
ಮಾಧ್ಯಮಗಳಲ್ಲಿ ರನ್ಯರಾವ್ ಎಂಬ ಚಿತ್ರನಟಿಯವರು ಚಿನ್ನದ ಗಟ್ಟಿಗಳನ್ನು ಅಕ್ರಮವಾಗಿ ದುಬೈನಿಂದ ಬೆಂಗಳೂರಿಗೆ ಸಾಗಣೆಮಾಡುತ್ತಿದ್ದ ಸಮಯದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿರುವುದು ವರದಿಯಾಗಿದೆ. ಪ್ರಕರಣದ ವಿಚಾರಣೆಯ ಸಮಯದಲ್ಲಿ ಬಂಧಿತ ರನ್ಯಾ ರಾವ್ ಶಿಷ್ಟಾಚಾರ ಸೌಲಭ್ಯಗಳನ್ನು ದುರ್ಬಳಕೆ ಮಾಡಿಕೊಂಡು, ಈ ಅಕ್ರಮವನ್ನು ಮಾಡಿರುವ ಬಗ್ಗೆ ವರದಿಯಾಗಿದೆ. ಜೊತೆಗೆ ಉನ್ನತ ಅಧಿಕಾರಿಗಳಿಗೆ ವಿಮಾನ ನಿಲ್ದಾಣಗಳಲ್ಲಿ ನೀಡಲಾಗುವ ಶಿಷ್ಟಾಚಾರಗಳನ್ನು ತಮ್ಮ ತಂದೆ ಐಪಿಎಸ್ ಅಧಿಕಾರಿ ಕರ್ನಾಟಕ ರಾಜ್ಯ ಪೊಲೀಸ್ ಗೃಹ ನಿರ್ಮಾಣ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಕೆ. ರಾಮಚಂದ್ರರಾವ್ ಹೆಸರನ್ನು ಬಳಕೆ ಮಾಡಿಕೊಂಡು ಮತ್ತು ಅವರಿಗೆ ನೀಡುವ ಶಿಷ್ಟಾಚಾರ ಸೇವೆಗಳನ್ನು ರನ್ಯಾ ರಾವ್ ದುರ್ಬಳಕೆ ಮಾಡಿಕೊಂಡು ವಿಮಾನ ನಿಲ್ದಾಣಗಳಲ್ಲಿ ತಪಾಸಣೆಗಳನ್ನು ತಪ್ಪಿಸಿಕೊಂಡು ಅಕ್ರಮ ಕೃತ್ಯಗಳನ್ನು ನಡೆಸಿರುವ ಬಗ್ಗೆ ವರದಿಯಾಗಿದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.
ಹೀಗಾಹಿ ಶಿಷ್ಟಾಚಾರ ಸೌಲಭ್ಯಗಳ ಬಳಕೆಯನ್ನು ಪಡೆದುಕೊಳ್ಳಲು ಕಾರಣವಾದ ಅಂಶಗಳು ಹಾಗೂ ಸಂದರ್ಭಗಳು ಮತ್ತು ಈ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ಪಾತ್ರದ ಬಗ್ಗೆ, ತನಿಖೆ ನಡೆಸುವುದು ಅಗತ್ಯವೆಂದು ಸರ್ಕಾರ ಪರಿಗಣಿಸಿದೆ ಎಂದು ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ ತನ್ನ ಆದೇಶದಲ್ಲಿ ವಿವರಿಸಿದೆ.