Search

HOME MINISTER PROVOCATIVE STATEMENT: ಜೆಬಿ ನಗರದಲ್ಲಿ ಯುವಕನ ಕೊಲೆ ಪ್ರಕರಣ ಪ್ರಚೋದನಕಾರಿ ಹೇಳಿಕೆ ಕೊಟ್ಟ ಗೃಹ ಸಚಿವರ ವಿರುದ್ಧ ಹೆಚ್‌ʼಡಿಕೆ ಕಿಡಿ

ಮೈಸೂರು: ಬೆಂಗಳೂರಿನ ಜೆಬಿ ನಗರದಲ್ಲಿ ಯುವಕನ ಕೊಲೆಯ ಬಗ್ಗೆ ಗೃಹ ಸಚಿವ ಅರಗ ಜ್ಞಾನೇಂದ್ರ ನೀಡಿರುವ ಹೇಳಿಕೆಯ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದಿಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; “ಗೃಹ ಸಚಿವರು ತಮ್ಮ ಜವಾಬ್ದಾರಿ ಮರೆತಿದ್ದಾರೆ. ಚುಚ್ಚಿಚುಚ್ಚಿ ಕೊಲೆ ಮಾಡಿದ್ದಾರೆ ಎಂದು ಪ್ರಚೋದಾನಾತ್ಮಕ ಹೇಳಿಕೆ ನೀಡಿದ್ದಾರೆ. ಗೃಹ ಸಚಿವರೇ ಹೀಗೆ ಹೇಳಿಕೆ ಕೊಟ್ಟರೆ ಹೇಗೆ? ಅರೆಬರೆ ಮಾಹಿತಿ ಇಟ್ಟುಕೊಂಡು ಅತ್ಯಂತ ಬೇಜವಾಬ್ದಾರಿಯಿಂದ ಅವರು ಹೇಳಿಕೆ ನೀಡಿದ್ದಾರೆ” ಎಂದು ಕಟುವಾಗಿ ಟೀಕಿಸಿದರು.
ಈ ಹತ್ಯೆ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರನ್ನು ಬಂಧಿಸಿ ಕಠಿಣ ಸೆಕ್ಷನ್‌ʼಗಳನ್ನು ಹಾಕಿ ಶಿಕ್ಷೆಯಾಗುವಂತೆ ಮಾಡಬೇಕು. ಅದನ್ನು ಹೊರತುಪಡಿಸಿ ಅದನ್ನು ವಿವಾದವನ್ನಾಗಿ ಪರಿವರ್ತಿಸುವ ಹುನ್ನಾರ ಮಾಡುವುದು ಬೇಡ ಎಂದು ಅವರು ಒತ್ತಾಯ ಮಾಡಿದರು.
ಸಚಿವರು ಹಿಂದೂ ಯುವಕ ಎನ್ನಲಿಲ್ಲ!! ಯಾಕೆ
ಕೊಲೆಯಾದ ಯುವಕನ್ನು ʼದಲಿತ ಯುವಕʼ ಎಂದು ಕರೆದ ಗೃಹ ಸಚಿವರು, ಎಲ್ಲಿಯೂ ಆತನನ್ನು ʼಹಿಂದೂ ಯುವಕʼ ಎಂದು ಕರೆಯಲಿಲ್ಲ. ಇದು ಏನನ್ನು ಸೂಚಿಸುತ್ತದೆ? ದಲಿತ ಯುವಕ ಹಿಂದೂ ಅಲ್ಲವೇ? ಯಾಕೆ ಈ ತಾರತಮ್ಯ ಎಂದು ಮಾಜಿ ಮುಖ್ಯಮಂತ್ರಿಗಳು ಪ್ರಶ್ನಿಸಿದರು.
ಪ್ರತಿಯೊಂದು ವಿಚಾರವನ್ನು ಬಿಜೆಪಿಯವರು ರಾಜಕೀಕರಣಗೊಳಿಸುತ್ತಿದ್ದಾರೆ. ದಲಿತ ಯುವಕ ಕೊಲೆ ಆಗಿದ್ದಾನೆ ಎಂದು ಹೇಳುತ್ತಾ ಸಾಮರಸ್ಯಕ್ಕೆ ಧಕ್ಕೆ ತರುತ್ತಿದ್ದಾರೆ. ಪೋಲಿಸರು ಒಂದು ಹೇಳಿಕೆ ಕೊಟ್ಟರೆ, ಗೃಹ ಸಚಿವರು ಮತ್ತೊಂದು ಹೇಳಿಕೆ ಕೊಡುತ್ತಿದ್ದಾರೆ.

ಯಾರ ಮಾತು ಸತ್ಯ? ಯಾರ ಮಾತು ಸುಳ್ಳು? ಜವಾಬ್ದಾರಿ ಸ್ಥಾನದಲ್ಲಿರುವ ಗೃಹ ಸಚಿವರು ಎಲ್ಲ ಮಾಹಿತಿಯನ್ನು ಪಡೆದುಕೊಂಡು ಮಾತನಾಡಬೇಕು. ಅದನ್ನು ಬಿಟ್ಟು ಹೊಣೆಗೇಡಿತನದಿಂದ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ. ಅವರು ಇಲ್ಲಿ ಕಾಮಿಡಿ ಮಾಡಲು ಬಂದಿದ್ದಾರಾ? ಇಷ್ಟೆಲ್ಲ ನಡೆಯುತ್ತಿದ್ದರೂ ಮುಖ್ಯಮಂತ್ರಿ ಮೌನವಾಗಿರುವುದು ಸರಿಯಲ್ಲ ಎಂದು ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡರು.
ಸಿನಿಮಾಗಳೇ ಪ್ರೇರಣೆ
ಕಾಶ್ಮೀರ ಫೈಲ್‌ಗೂ ಈ ಘಟನೆಗೂ ಸಂಬಂಧ ಇಲ್ಲ ಎಂದ ಅವರು. ನಮ್ಮಲ್ಲಿ ಬಾಂಧವ್ಯದ ಬಾಂಡಿಂಗ್ ನಶಿಸಿ ಹೋಗುತ್ತಿದೆ. ಅದಕ್ಕೆ ಇಂಥ ಘಟನೆಗಳು ಹೆಚ್ಚಾಗುತ್ತಲೇ ಇವೆ. ಆದರೆ, ಈ ಯುವಕನ ಕೊಲೆಯನ್ನು ಭಾಷೆ, ಧರ್ಮದ ಹಿನ್ನೆಲೆಯಲ್ಲಿ ತಿರುಚುವ ಮೂಲಕ ಇದರಲ್ಲೂ ಬಿಜೆಪಿ ನಾಯಕರು ರಾಜಕೀಯ ಮಾಡುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಹಿಜಾಬ್ ವಿಚಾರವಾಗಿ ಮಂಡ್ಯದಲ್ಲಿ ಅಲ್ಲಾ ಹೋ ಅಕ್ಬರ್ ಎಂದು ಘೋಷಣೆ ಕೂಗಿದ್ದ ವಿದ್ಯಾರ್ಥಿನಿ ಮುಸ್ಕಾನ್ ಬಗ್ಗೆ ಅಲ್‌ಕೈದಾ ಮುಖಂಡನಿಂದ ಮೆಚ್ಚುಗೆ ವ್ಯಕ್ತವಾದ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿಗಳು; ಅಲ್‌ಕೈದಾ ಕಟ್ಟಿಕೊಂಡು ಕರ್ನಾಟಕಕ್ಕೆ ಏನಾಗಬೇಕು? ಅಂಥವರಿಗೆ ನಮ್ಮ ಜನ ಉತ್ತೇಜನ ನೀಡಲ್ಲ ಎಂದರು.

ಕುಮಾರಸ್ವಾಮಿ ಅವರಿಗೆ ಬಿಜೆಪಿ ಸುಪಾರಿ ನೀಡಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಹೌದು, ಜನರ ರಕ್ತ ಹೀರುತ್ತಿರುವ ಎರಡೂ ರಾಷ್ಟ್ರೀಯ ಪಕ್ಷಗಳನ್ನು ಮುಗಿಸಲು ನಾನು ಸುಫಾರಿ ತೆಗೆದುಕೊಂಡಿದ್ದೇನೆ ಎಂದರು. ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಕಿತ್ತೊಗೆಯುತ್ತೇನೆ ಎಂದು ಅವರು ಹೇಳಿದರು.
ಮಾವು ವಿವಾದಕ್ಕೆ ಕಿಡಿ
ರಾಜ್ಯದಲ್ಲಿ ವರ್ಷಕ್ಕೆ 500 ಕೋಟಿ ರೂಪಾಯಿಗೂ ಹೆಚ್ಚು ಮಾವಿನ ವ್ಯವಹಾರ ನಡೆಯುತ್ತದೆ. ಮುಸ್ಲೀಮರಿಗೆ ಮಾರಬೇಡಿ ಎಂದು ರೈತರಿಗೆ ಹೇಳುವ ವಿಶ್ವ ಹಿಂದೂ ಪರಿಷತ್ʼನವರು ಬಂದು ರೈತರಿಂದ ಮಾವು ಖರೀದಿ ಮಾಡುತ್ತಾರಾ? ಮಾವು ನಂತರ ಹುಣಸೆ ಹಣ್ಣು ಖರೀದಿ ವಿಚಾರದಲ್ಲಿ ಕೂಡ ಖ್ಯಾತೆ ತೆಗೆಯುತ್ತಿದ್ದಾರೆ. ಹಾಗಾದರೆ, ಎಲ್ಲ ಕೃಷಿ ಉತ್ಪನ್ನಗಳನ್ನು ರೈತರಿಂದ ನೇರವಾಗಿ ಇವರೇ ಕೊಳ್ಳಲಿ ಎಂದು ಕುಮಾರಸ್ವಾಮಿ ಅವರು ಸವಾಲು ಹಾಕಿದರು.

More News

You cannot copy content of this page