ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಹಾಸನ ಅಶ್ಲೀಲ ವಿಡಿಯೋ ಪ್ರಕರಣ ಬೆಳಕಿಗೆ ಬಂದ ಬಳಿಕ ಇದೇ ಮೊದಲ ಬಾರಿಗೆ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಪದ್ಮನಾಭನಗರದಲ್ಲಿ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ ನಿಖಿಲ್ ಕುಮಾರಸ್ವಾಮಿ, ದೇವೇಗೌಡ ದಂಪತಿಯ ಆರೋಗ್ಯ ವಿಚಾರಿಸಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ನಾನು ವೈರಲ್ ಜ್ವರದಿಂದ ನರಳುತ್ತಿದ್ದೆ. ಹೀಗಾಗಿ ಭೇಟಿ ಸಾಧ್ಯವಾಗಿರಲಿಲ್ಲ. ಇದೀಗ ನೇರವಾಗಿ ಬಂದು ತಾತ ದೇವೇಗೌಡರ ಆರೋಗ್ಯ ವಿಚಾರಿಸಿದ್ದೇನೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ. ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿ ಬಂದಿರುವ ಆರೋಪಗಳ ಕುರಿತಂತೆ ರಾಜ್ಯ ಸರ್ಕಾರ ಈಗಾಗಲೇ ವಿಶೇಷ ತನಿಖಾ ದಳ ರಚಿಸಿದೆ. ಪೊಲೀಸ್ ಅಧಿಕಾರಿಗಳ ತಂಡ ತನಿಖೆ ಆರಂಭಿಸಿದೆ. ಕಾನೂನಿಗಿಂತ ಯಾರೂ ದೊಡ್ಡವರಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಪ್ರಕರಣಕ್ಕೂ ದೇವೇಗೌಡರಿಗೂ ಯಾವುದೇ ಸಂಬಂಧ ಇಲ್ಲ. ರಾಜ್ಯದ ಜನರಿಗೆ ಒಂದು ತಪ್ಪು ಸಂದೇಶ ಹೋಗುತ್ತಿದೆ. ದೇವೇಗೌಡರ ಜೀವನ ತೆೆರೆದ ಪುಸ್ತಕ. ಅವರ ಜೀವನ ಎಲ್ಲರಿಗೂ ಸ್ಪೂರ್ತಿ.
ಪ್ರಸಕ್ತ ಬೆಳವಣಿಗೆಯಿಂದ ದೇವೇಗೌಡರು ನೊಂದಿದ್ದಾರೆ. ನಮ್ಮ ಅಜ್ಜಿ ಕೂಡ ಬೇಸರದಲ್ಲಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಸುವ ವೇಳೆ ನಿಖಿಲ್ ಕುಮಾರಸ್ವಾಮಿ, ಹಾಸನ ಸಂಸದ ಎಂದು ಮಾತ್ರ ಹೇಳಿದ್ದಾರೆ ಹೊರತು ಪ್ರಜ್ವಲ್ ರೇವಣ್ಣ ಎಂದು ಪ್ರಸ್ತಾಪಮಾಡದಿರುವುದು ಕುತೂಹಲ ಮೂಡಿಸಿದೆ. ಹಾಸನಕ್ಕೆ ನಾನು ಅಪರೂಪಕ್ಕೆ ಭೇಟಿ ಕೊಡುತ್ತೇನೆ. ಹಾಸನಾಂಬೆ ಜಾತ್ರೆ ವೇಳೆ ಮನೆಗೆ ಭೇಟಿ ಕೊಡುತ್ತೇನೆ. ಅದನ್ನು ಹೊರತುಪಡಿಸಿ ಅಪರೂಪಕ್ಕೆ ಅಲ್ಲಿಗೆ ಭೇಟಿ ನೀಡುತ್ತೇನೆ. ಹಾಸನ ಸಂಸದರ ಜೊತೆ ಹೆಚ್ಚಿನ ಸಂಪರ್ಕ ಇಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ಹೆಣ್ಣು ಮಕ್ಕಳ ಮುಖಗಳನ್ನು ಬ್ಲರ್ ಮಾಡಿಲ್ಲ. ಗುರುತು ಮರೆಮಾಚಲು ಮುಖ ಬ್ಲರ್ ಮಾಡಬೇಕಾಗಿತ್ತು. ಇದರಿಂದ ನನಗೆ ಬಹಳ ದು:ಖವಾಗಿದೆ ಎಂದು ನಿಖಿಲ್ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸದೆ ತಂದೆ ಕುಮಾರಸ್ವಾಮಿ ಪರ ಪ್ರಚಾರ ನಡೆಸಿದ್ದರು. ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಪ್ರಚಾರ ಸಭೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.