ಹುಬ್ಬಳ್ಳಿ: ಸಂವಿಧಾನದ ಬಗ್ಗೆ ಗೊತ್ತಿಲ್ಲದ, ಸಂವಿಧಾನ ಓದಿರದ ನರೇಂದ್ರ ಮೋದಿ ಪ್ರಚಾರಕ್ಕಾಗಿ ಸಂವಿಧಾನ ನಮ್ಮ ಧರ್ಮಗ್ರಂಥ ಎನ್ನುತ್ತಿದ್ದಾರೆ. ನರೇಂದ್ರ ಮೋದಿ ಸಾಧನೆಯ ವೀರ ಅಲ್ಲ, ಘೋಷಣಾ ವೀರ ಎಂದು ಕಾಂಗ್ರೆಸ್ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ಚುನಾವಣೆ ಪೂರ್ವದಲ್ಲಿ ಪ್ರಣಾಳಿಕೆಯನ್ನು ತರುವುದು ವಾಡಿಕೆ. ಇದರಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ, ಮುಂದಿನ ದಿನಗಳಲ್ಲಿ ಮಾಡುವ ಯೋಜನೆ ಬಗ್ಗೆ ಹೇಳಬೇಕು. ಆದರೆ ಮೋದಿಯವರು ಹತ್ತು ವರ್ಷದಲ್ಲಿ ಮಾಡಿರುವ ಒಂದೇ ಒಂದು ಕಾರ್ಯದ ಬಗ್ಗೆ ಪ್ರಣಾಳಿಕೆಯಲ್ಲಿ ಬಿಡುಗಡೆ ಮಾಡಿಲ್ಲ. ಇಷ್ಟು ದಿನ ಸ್ಕಿಲ್ ಇಂಡಿಯಾ, ಅಚ್ಛೆದೀನ್ ಹೆಸರಲ್ಲಿ ಜನರಿಗೆ ಸುಳ್ಳು ಹೇಳಿ ವಂಚನೆ ಮಾಡಿದ್ದಾರೆ. ಈಗ ಅಮೃತ್ ದಿನ್ ಹೆಸರಲ್ಲಿ ಮತ್ತೊಮ್ಮೆ ಜನರಿಗೆ ಮೋಸ ಮಾಡಲು ಬಂದಿದ್ದಾರೆ ಎಂದರು.
ಇದು ಅಮೃತ ಕಾಲ ಅಲ್ಲ, ಅನ್ಯಾಯದ ಕಾಲ. ಐದು ನ್ಯಾಯ ಪತ್ರಗಳನ್ನು ನಾವು ಬಿಡುಗಡೆ ಮಾಡಿದ್ದೇವೆ. ನರೇಂದ್ರ ಮೋದಿಯವರು ಸಂವಿಧಾನ ಧರ್ಮ ಗ್ರಂಥ ಎಂದು ಜಾಹಿರಾತು ಕೊಟ್ಟಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಎಸ್‌ಸಿ ಎಸ್‌ಟಿ ಮೀಸಲಾತಿ ಕೊಡುವುದಿಲ್ಲ ಎಂದು ಜಾಹಿರಾತನಲ್ಲಿ ಹೇಳಿದ್ದಾರೆ. ಹತ್ತು ವರ್ಷಗಳಲ್ಲಿ ಒಂದೇ ಒಂದು ಸತ್ಯವನ್ನ ಜನರಿಗೆ ಮೋದಿ ಹೇಳಿಲ್ಲ. ಮೋದಿಯವರಲ್ಲಿ ಹೇಳಿಕೆಯಲ್ಲಿ ಸಾಕಷ್ಟು ದ್ವಂದ್ವ ಇದೆ. ಮೋದಿಯವರು ಮಾಡಿದ ಸಾಧನೆ ಬಗ್ಗೆ ಹೇಳಲಿಕ್ಕೆ ಆಗಲ್ಲ,ಆದ್ದರಿಂದ ಧರ್ಮಗಳ ಮೇಲೆ ಚುನಾವಣೆ ಮಾಡಲು ಹೊರಟಿದ್ದಾರೆ. ಮೋದಿಯವರು ಪ್ರಧಾನ ಸುಳ್ಳುಗಾರ, ಸುಳ್ಳಿನ ಸರ್ದಾರ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.