Search

COVER UP PRICE HIKE: ಬೆಲೆ ಏರಿಕೆ ಮುಚ್ಚಿ ಹಾಕುವ ಉದ್ದೇಶದಿಂದ ಹಿಜಾಬ್, ಹಲಾಲ್ ಸರ್ಕಾರದವರು ತಂದಿದ್ದಾರೆ: ಭಾಸ್ಕರ್ ರಾವ್ ಆರೋಪ

ಬೆಂಗಳೂರು : ಇವತ್ತು ಪೆಟ್ರೋಲ್, ಡೀಸಲ್ ಬೆಲೆ ಏರುತ್ತಲೇ ಇದೆ, ಇದನ್ನು ಮುಚ್ಚಿಹಾಕುವ ಉದ್ದೇಶದಿಂದ ಹಿಜಾಬ್, ಹಲಾಲ್ ತಂದಿದ್ದಾರೆ, ಜನಸಾಮಾನ್ಯರು ಎಚ್ಚೆತ್ತುಕೊಳ್ಳಬೇಕು ಎಂದು ಮಾಜಿ ಪೊಲೀಸ್ ಅಧಿಕಾರಿ, ಆಮ್ ಆದ್ಮಿ ಪಕ್ಷದ ಮುಖಂಡ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರಿಗೆ ಬೇಕಾಗಿರೋದನ್ನ ಸರ್ಕಾರ ನೀಡಬೇಕು, ಅದನ್ನು ಬಿಟ್ಟು ಜನರನ್ನು ಈ ರೀತಿ ಗೊಂದಲದಲ್ಲಿಡೋದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು. ನಾವು ಬೇರೆ ಬೇರೆ ಧರ್ಮ ಪಾಲಿಸುತ್ತಿರಬಹುದು ಆದರೆ, ನಮ್ಮಲ್ಲಿರೋದು ಒಂದೇ ಡಿಎನ್ ಎ, ನಮ್ಮಲ್ಲಿರೋದು ಒಂದೇ ರಕ್ತ ಎಂದು ತಿಳಿಸಿದರು.
ಈ ಮುಖಂಡರು ಬೆಲೆ ಏರಿಕೆ ವಿರುದ್ಧ ಯಾಕೆ ಮಾತನಾಡುತ್ತಿಲ್ಲ, ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ರಾಜ್ಯ ಸರ್ಕಾರ ಮತ್ತು ಬಿಜೆಪಿ ಮುಖಂಡರನ್ನು ಪ್ರಶ್ನಿಸಿದ ಭಾಸ್ಕರ್ ರಾವ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿರುವ ರಾಜ್ಯ ಬಜೆಟ್ ಬಗ್ಗೆಯೂ ಟೀಕಿಸಿದರು.
ಕೇವಲ ಟೊಳ್ಳು ಹೇಳಿಕೆ ಹಾಗೂ ಕಾಗದಕ್ಕೆ ಮಾತ್ರ ಸೀಮಿತವಾದ ಬಜೆಟ್ ಘೋಷಣೆ ಮಾಡಲಾಗಿದೆ, ಅರವಿಂದ್ ಕೇಜ್ರಿವಾಲ್ ದೆಹಲಿಯಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತಿದ್ದಾರೆ. ರಾಜ್ಯದಲ್ಲಿಯೂ ಅದೇ ರೀತಿಯಲ್ಲಿ ಅಭಿವೃದ್ದಿ ಮಾಡುವ ಛಲ ನಮ್ಮದು ಎಂದು ಹೇಳಿದರು.
ಜನಸಾಮಾನ್ಯರು ಭ್ರಷ್ಟಾಚಾರದಿಂದ ನೊಂದಿದ್ದಾರೆ, ಅಧಿಕಾರಿ ನೇಮಕಾತಿಯಲ್ಲೂ ಭ್ರಷ್ಟಾಚಾರ, ಕೋಟ್ಯಂತರ ರೂಪಾಯಿಗೆ ಸ್ಥಾನಗಳು ಹರಾಜಾಗುತ್ತಿವೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ ಅವರು, ಇವರಿಗೆ ಎಲ್ಲಿಂದ ಐಷಾರಾಮಿ ಕಾರುಗಳು ಬರುತ್ತವೆ? ಮುಂದಿನ ದಿನಗಳಲ್ಲಿ ಎಲ್ಲರ ಜಾತಕ ಬಿಚ್ಚಿಡುವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ನಿಮ್ಮ ದುಡ್ಡಿನಿಂದ ಇವರು ಐಷಾರಾಮಿ ಜೀವನ ನಡೆಸುತ್ತಿದ್ದಾರೆ, ಇವೆಲ್ಲಾ ನಾನು ಕಣ್ಣಾರೆ ನೋಡಿದ್ದೇನೆ, ಯಾವ ಸರ್ಕಾರದಲ್ಲಿ ದುಡ್ಡಿನ ಕೊರತೆ ಇಲ್ಲ, ವಿಷನ್ ಕೊರತೆ ಇದೆ ಅಷ್ಟೇ ಎಂದರು. ಜನರಿಗೆ ಅಪಮಾನ ಮಾಡಿ ಮತ ಪಡೆಯುತ್ತಿದ್ದಾರೆ ಎಂದು ಟೀಕಿಸಿದರು.
ರಾಘವೇಂದ್ರ ಬ್ಯಾಂಕ್, ಐಎಂಎ ಹಾಗೂ ವಶಿಷ್ಟ ಬ್ಯಾಂಕ್ ನಲ್ಲಿ ಅವ್ಯವಹಾರ ನಡೆದಿದೆ. ಈಗ ಅಲ್ಲಿ ಅವ್ಯವಹಾರ ನಡೆಸಿದವರು ಎಲ್ಲಿದ್ದಾರೆ ಎಂದು ಪ್ರಶ್ನಿಸಿದ ಅವರು, ನಾನು ದೊಡ್ಡ ಪಕ್ಷಗಳಿಗೆ ಹೋಗಿ ಎಂಪಿ, ಅಥವಾ ರಾಜಕೀಯ ಟಿಕೆಟ್ ಕೇಳಿಲ್ಲ, ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಬಂದಿದ್ದೇನೆ ಎಂದರು.

ಪ್ರತಿಯೊಬ್ಬ ಅಧಿಕಾರಿ ಭಯದಿಂದ ಬದುಕುತ್ತಿದ್ದಾನೆ, ರಾಜಕೀಯ ದಂಧೆ ಮಾಡುವವರು ಇದ್ದಾರೆ, ಇವರೆಲ್ಲರೂ ಚೆನ್ನಾಗಿದ್ದಾರೆ, ಬದಲಾವಣೆಯ ಸಮಯ ಈಗ ಬಂದಿದೆ, ಎಲ್ಲರಿಗೂ ಉತ್ತಮ ಆಡಳಿತಬೇಕು, ಮೊದಲು ದೇಶ ಮುಖ್ಯ ಎಂದು ಹೇಳಿದರು.
ಯುವಕರಿಗೆ ಉದ್ಯೋಗಾವಕಾಶ ನೀಡಿಲ್ಲ, ಹಣದ ಪ್ರಭಾವದಿಂದ ಕ್ರಿಮಿನಲ್ ಕೆಲ್ಸ ಮಾಡುತ್ತಿದ್ದಾರೆ, ಮೊದಲು ಉದ್ಯೋಗ ನೀಡಬೇಕು, ನಮ್ಮ ಪಕ್ಷ ದುಡ್ಡಿನಲ್ಲಿ ಬಡವ ಪಕ್ಷ, ಆದರೆ ವಿಚಾರದಲ್ಲಿ ಅಲ್ಲ, ಕರ್ನಾಟಕದ ಆಮ್ ಆದ್ಮಿ ಪಾರ್ಟಿ ಗ್ರಾಮ ಪಂಚಾಯಿತಿನಿಂದ ವಿಧಾನಸಭೆ ವರೆಗೆ ಕೆಲಸ ಮಾಡಲಿದೆ ಎಂದರು.
ಸಂವಾದ ಕಾರ್ಯಕ್ರಮಕ್ಕೂ ಮುನ್ನಾ ಪೊರಕೆ ಹಿಡಿದು ಫೋಸ್ ಕೊಟ್ಟ ಭಾಸ್ಕರ ರಾವ್, ಬಸವಣ್ಣ ಸ್ಮರಿಸಿ ಮಾತು ಪ್ರಾರಂಭಿಸಿದರು. ಕಾಯಕವೇ ಕೈಲಾಸ ಮಾತು ಸ್ಮರಿಸಿದ ಅವರು, ಕೆಂಪೇಗೌಡ, ಕನಕದಾಸರು, ಶಂಕರಾಚಾರ್ಯರು ಹಾಗೂ ಮಧ್ವಾಚಾರ್ಯ, ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ರಾಜ್ಯದ ಆರೂವರೆ ಕೋಟಿ ಜನತೆಗೆ ನೆನೆಸಿಕೊಂಡು ನೆಲಕ್ಕೆ ನಮಸ್ಕಾರ ಮಾಡಿ ಸ್ಮರಿಸಿದರು.

More News

You cannot copy content of this page