Search

BANANA AND BISCUITS WILL GIVE: ಮೊಟ್ಟೆ ಸೇವಿಸದ ಮಕ್ಕಳಿಗೆ ಬಾಳೆ ಹಣ್ಣು, ಬಿಸ್ಕೆಟ್ ಭಾಗ್ಯ: ಸಚಿವ ಮಧು ಬಂಗಾರಪ್ಪ

ಬೆಂಗಳೂರು: ಪ್ರಸಕ್ತ ಸಾಲಿನ ಬಜೆಟ್‌ ನಲ್ಲಿ ಶಿಕ್ಷಣ ಇಲಾಖೆಗೆ ಹೆಚ್ಚಿನ ಅನುದಾನ ದೊರೆತಿದ್ದು, ಇದರಿಂದ ಸರ್ಕಾರಿ ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿ ಪರಿವರ್ತಿಸಲಾಗುವುದು. 10 ನೇ ತರಗತಿವರೆಗೆ ಎರಡು ಮೊಟ್ಟೆ ನೀಡುವ ಕಾರ್ಯಕ್ರಮದಿಂದ ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳಣಿಗೆಗೆ ಸಹಕಾರಿಯಾಗಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರ ಬಿ.ಟಿ.ಎಂ.ವಿಧಾನಸಭಾ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳನ್ನು ಮೀರಿಸುವಂತೆ ಮಾಡಿರುವ ಅಭಿವೃದ್ಧಿ ಚಟುವಟಿಕೆಯನ್ನು ವೀಕ್ಷಿಸಿದ ನಂತರ ಆಡುಗೋಡಿ ಸರ್ಕಾರಿ ಶಾಲೆಯಲ್ಲಿ 22 ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ಮತ್ತು ಬ್ಯಾಗ್ ಮತ್ತು ಸ್ವೆಟರ್‌ ಗಳನ್ನು ವಿತರಿಸಿ ದಾನಿಗಳನ್ನು ಸನ್ನಾನಿಸಿ ಮಾತನಾಡಿದ ಮಧು ಬಂಗಾರಪ್ಪ, 8 ನೇ ತರಗತಿವರೆಗಿನ ಮಕ್ಕಳಿಗೆ ಒಂದು ಮೊಟ್ಟೆ ನೀಡಲಾಗುತ್ತಿತ್ತು. ಇದೀಗ ಪ್ರೌಢ ಶಾಲೆಗೂ ಈ ಯೋಜನೆ ವಿಸ್ತರಿಸಿ ಎರಡು ಮೊಟ್ಟೆ ವಿತರಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಸದೃಢವಾದ ದೇಹ ಇದ್ದರೆ ಸದೃಢವಾದ ಮನಸ್ಸು ಇರುತ್ತದೆ ಎಂಬುದನ್ನು ಮನಗಂಡು ಮುಖ್ಯಮಂತ್ರಿ ಅವರು ಮಾತೃ ಹೃದಯದಿಂದ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಮೊಟ್ಟೆ ಸೇವಿಸದ ಮಕ್ಕಳಿಗೆ ಬಾಳೆ ಹಣ್ಣು, ಬಿಸ್ಕೆಟ್ ಭಾಗ್ಯ ಕಲ್ಪಿಸಲಾಗುತ್ತಿದೆ ಎಂದರು.
ರಾಜ್ಯದಲ್ಲಿ 40 ಸಾವಿರಕ್ಕೂ ಅಧಿಕ ಶಾಲೆಗಳಿದ್ದು, ಎಲ್ಲವನ್ನೂ ಸರ್ಕಾರವೇ ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ. ದಾನಿಗಳು, ಸಿ.ಎಸ್.ಆರ್‌ ವಲಯದಿಂದ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ನೆರವು ಹರಿದು ಬರಬೇಕು ಎಂದರು. ಸರ್ಕಾರಿ ಶಾಲೆಗಳಿಗೆ ಸೌಲಭ್ಯವಷ್ಟೇ ಅಲ್ಲದೇ ಉತ್ತಮ ರೀತಿಯಲ್ಲಿ ವಿದ್ಯಾದಾನ ಮಾಡಬೇಕಾಗಿದೆ. ದುರಸ್ತಿಗೆ ಸಾಕಷ್ಟು ಹಣದ ಅಗತ್ಯವಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಸಂಪನ್ಮೂಲ ದೊರೆಯುವ ವಿಶ್ವಾಸವಿದೆ. ಸರ್ಕಾರಿ ಶಾಲೆಗಳಲ್ಲಿ ಪ್ರತಿವರ್ಷ ಬದಲಾವಣೆಯಾಗಲಿದೆ. ಶಾಲಾ ಮಕ್ಕಳ ಬ್ಯಾಗ್‌ ಹೊರೆ ಕಡಿಮೆ ಮಾಡಿ, ಸೂಕ್ತ ಸೌಲಭ್ಯದ ಮೂಲಕ ಕಲಿಕೆಯ ವಾತಾವರಣದಲ್ಲಿ ಬದಲಾವಣೆ ತರಲು ಪ್ರಯತ್ನಿಸಲಾಗುವುದು ಎಂದರು.

ಕೇಂದ್ರದ ರಾಷ್ಟ್ರೀಯ ಶಿಕ್ಷಣ ನೀತಿ ಬದಲು ರಾಜ್ಯದಲ್ಲಿ ಸೂಕ್ತ ಶಿಕ್ಷಣ ನೀತಿ ರೂಪಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಲಾಗಿದೆ. ಮುಂಬರುವ ದಿನಗಳಲ್ಲಿ ಈ ನಿಟ್ಟಿನಲ್ಲಿ ತಜ್ಞರ ತಂಡ ರಚಿಸಿ ಪ್ರತಿಯೊಂದು ವಿಷಯ, ಅಧ್ಯಾಯಗಳ ಬಗ್ಗೆಯೂ ಚರ್ಚಿಸಿ ವಿದ್ಯಾರ್ಥಿಗಳ ಜ್ಞಾನ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಶಿಕ್ಷಣ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಮಾಡಿಕೊಂಡಿರಲಿ. ಆದರೆ ನಾವು ಗುಣಾತ್ಮಕ ಶಿಕ್ಷಣದತ್ತ ಒಲವು ಹೊಂದಿದ್ದೇವೆ. ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಲು ರಾಜಕೀಯದ ಅಗತ್ಯವಿಲ್ಲ. ಶಿಕ್ಷಣದಲ್ಲಿ ದೊಡ್ಡ ಮಟ್ಟದಲ್ಲಿ ಬದಲಾವಣೆ ತರುವ ನಿರೀಕ್ಷೆ ಹೊಂದಿದ್ದೇನೆ ಎಂದರು.

More News

You cannot copy content of this page