Search

BANGALRU NORTH CONSTITUENCY LOBBEY: ಬೆಂಗಳೂರು ಉತ್ತರಕ್ಕಾಗಿ ಆರಂಭವಾದ ಲಾಭಿ: ಸಿಟಿ ರವಿ, ಶೋಭಾ ಸ್ಪರ್ಧೆ ತಡೆಗೆ ಡಿವಿಎಸ್ ದಾಳ: ಕಾದುನೋಡುವ ತಂತ್ರಕ್ಕೆ ಮುಂದಾದ ಎಸ್ ಟಿ ಎಸ್

…………………ಪಿ. ಕೆ. ಎಲ್………………….
ಬೆಂಗಳೂರು : ಬಿಜೆಪಿಯಲ್ಲಿ ಲೋಕಸಭಾ ಚುನಾವಣೆಗಾಗಿ ಜಂಘೀಕುಸ್ತಿ ಆರಂಭವಾಗಿದ್ದು, ಅದರಲ್ಲೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟ್ ಗಾಗಿ ಭಾರೀ ಲಾಭಿ, ಆಂತರಿಕ ಮಸಲತ್ತು ಆರಂಭವಾಗಿದೆ.
ಕಳೆದ ಒಂದು ತಿಂಗಳ ಹಿಂದೆಯಷ್ಟೇ ನಿವೃತ್ತಿಯ ಮಾತುಗಳನ್ನು ಆಡಿದ್ದ ಹಾಲಿ ಬೆಂಗಳೂರು ಉತ್ತರ ಲೋಕಸಭಾ ಸಂಸದ ಡಿ ವಿ ಸದಾನಂದಗೌಡ ಅವರು ಮತ್ತೆ ತಮ್ಮ ವರಸೆ ಬದಲಾಯಿಸಿದ್ದು, ಮತ್ತೆ ಸ್ಪರ್ಧಿಸುವ ಆಸಕ್ತಿ ವ್ಯಕ್ತಪಡಿಸುತ್ತಿರುವುದು ಬಿಜೆಪಿಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಪಕ್ಷದ ಪದಾಧಿಕಾರಿಗಳ ಆಯ್ಕೆ ವಿಚಾರದಲ್ಲಿ ತಮ್ಮ ಅಸಮಾಧಾನವನ್ನು ಸದಾನಂದಗೌಡರು ವ್ಯಕ್ತಪಡಿಸಿದ್ದರು. ಇದಕ್ಕೂ ಮುನ್ನ ಅವರು ರಾಜ್ಯ ಘಟಕದ ಮತ್ತು ಪ್ರತಿಪಕ್ಷದ ಆಯ್ಕೆ ಕುರಿತು ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದರು.
ಸದಾನಂದಗೌಡರು ಸ್ಪರ್ಧಿಸುವುದಿಲ್ಲ ಎಂಬ ಕಾರಣಕ್ಕಾಗಿ ಹಲವರು ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದು, ಟಿಕೆಟ್ ಗಾಗಿ ಭಾರೀ ಲಾಭಿ ಆರಂಭಿಸಿದ್ದಾರೆ. ಬಿಜೆಪಿಗೆ ಇದು ಸುಲಭದ ಕ್ಷೇತ್ರ ಎಂಬ ಕಾರಣಕ್ಕಾಗಿ ಮಾಜಿ ಶಾಸಕ ಸಿ ಟಿ ರವಿ, ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಮತ್ತು ಶಾಸಕ ಎಸ್ ಟಿ. ಸೋಮಶೇಖರ್ ಅವರ ಪುತ್ರರ ಹೆಸರುಗಳು ಚಾಲ್ತಿಗೆ ಬಂದಿವೆ.

ಇದರಲ್ಲೂ ಸಿ .ಟಿ. ರವಿ ಮತ್ತು ಎಸ್ ಟಿ ಸೋಮಶೇಖರ್ ವರ ನಡುವೆ ಜಂಘೀಕುಸ್ತಿ ಆರಂಭವಾಗಿದೆ. ಶಾಸಕ ಸ್ಥಾನಕ್ಕೆ ಸ್ಪರ್ಧೆ ನಡೆಸಿ ತಮ್ಮ ಬೆಂಬಲಿಗನ ಎದುರೇ ಸೋತು ಸುಣ್ಣವಾಗಿದ್ದ ಸಿಟಿ ರವಿ ಇದೀಗ ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದು, ಡಿ.ವಿ.ಸದಾನಂದಗೌಡರ ಕ್ಷೇತ್ರದಿಂದ ಕಣಕ್ಕಿಳಿಯಲು ಸಿ.ಟಿ ರವಿ ಲಾಬಿ ನಡೆಸುತ್ತಿದ್ದಾರೆ.
ಇದೇ ಕ್ಷೇತ್ರದಿಂದ ಪುತ್ರನ ರಾಜಕೀಯ ಭವಿಷ್ಯ ರೂಪಿಸಲು ಎಸ್ ಟಿ ಸೋಮಶೇಖರ್ ಕಸರತ್ತು ನಡೆಸುತ್ತಿದ್ದಾರೆ, ಇದೀಗ ಸಿ.ಟಿ ರವಿ ಎಂಟ್ರಿಯಿಂದ ಎಸ್ ಟಿ ಸೋಮಶೇಖರ್ ಅವರ ಪುತ್ರನಿಗೆ ಟಿಕೆಟ್ ಡೌಟ್ ಎನ್ನಲಾಗಿದೆ. ಬಿಜೆಪಿಯಲ್ಲಿ ಮೂಲ ಮತ್ತು ವಲಸಿಗರ ನಡುವೆ ಕ್ಷೇತ್ರ ಮತ್ತು ಟಿಕೆಟ್ ಗಾಗಿ ನಡೆಯುತ್ತಿರುವ ಫೈಟ್ ನಿಂದಾಗಿ ಕಮಲ ಕಲಿಗಳಿಂದ ಎಸ್. ಟಿ. ಸೋಮಶೇಖರ್ ಅಂತರ ಕಾಯ್ದುಕೊಂಡಿದ್ದಾರೆ.
ಕೇಸರಿ ಕಲಿಗಳ ವಿರುದ್ಧ ಬಹಿರಂಗವಾಗಿಯೇ ಸೋಮಶೇಖರ್ ಅವರು ವಾಗ್ದಾಳಿ ನಡೆಸುತ್ತಿದ್ದಾರೆ. ಬಿಜೆಪಿ ನಾಯಕರೇ, ಸೋಮಶೇಖರ್ ಅವರು ರೆಬಲ್ ಆಗಲು ಕಾರಣರಾದ್ರಾ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿವೆ. ರಾಜ್ಯ ಬಿಜೆಪಿ ನಾಯಕರಿಂದ ಪುತ್ರನಿಗೆ ಟಿಕೆಟ್ ಭರವಸೆ ಸಿಗದ ಹಿ‌ನ್ನೆಲೆಯಲ್ಲಿ ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ಸೋಮಶೇಖರ್ ಅವರ ಪುತ್ರ ನಿಶಾಂತ್ ಗೆ ಕಾಂಗ್ರೆಸ್ ಟಿಕೆಟ್ ಕೊಡಿಸಲು ಎಸ್ ಟಿ ಎಸ್ ಎಲ್ಲಿಲ್ಲದ ಕಸರತ್ತನ್ನು ನಡೆಸುತ್ತಿದ್ದಾರೆ. ಇನ್ನೊಂದೆಡೆ, ಬೆಂಗಳೂರು ಲೋಕಸಭಾ ಕ್ಷೇತ್ರದ ಸ್ಪರ್ಧೆಗೆ ಸಚಿವ ಕೃಷ್ಣಭೈರೇಗೌಡ ಅವರು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪುತ್ರನ ಪರ ಎಸ್ ಟಿ ಸೋಮಶೇಖರ್ ಅವರು ಲಾಭಿ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಸೋಮಶೇಖರ್ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ಅನೇಕ ಕೈ ಪ್ರಮುಖ ನಾಯಕರನ್ನ ಭೇಟಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ, ಕೇಂದ್ರ ಸಚಿವೆ ಶೋಭಾ ಅವರು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಿದರೆ, ಬೆಂಗಳೂರು ಉತ್ತರದಿಂದ ಸಿಟಿ ರವಿ, ಇಲ್ಲವೆ ಬೆಂಗಳೂರು ಉತ್ತರದಿಂದ ಶೋಭಾ ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗಿದೆ.

ಆದರೆ, ಸಿಟಿ ರವಿ ಮತ್ತು ಶೋಭಾ ಇಬ್ಬರೂ ಬೆಂಗಳೂರಿಂದ ಸ್ಪರ್ಧೆ ನಡೆಸಲು ಬಿಜೆಪಿಯಲ್ಲಿ ಒಂದು ಬಣ ತಡೆಯುತ್ತಿದೆ ಎನ್ನಲಾಗಿದ್ದು, ಇದರ ಹಿನ್ನೆಲೆಯಾಗಿ ಸದಾನಂದಗೌಡರಿಗೆ ಟಿಕೇಟ್ ಆಸೆ ತೋರಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಆದ್ದರಿಂದ ಅವರು ಮತ್ತೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ ಎಂದು ಬಿಜೆಪಿ ಪಡಸಾಲೆಯಲ್ಲಿ ಕೇಳಿಬರುತ್ತಿರುವ ಮಾತಾಗಿದೆ.
ಒಂದು ವೇಳೆ ಬಿಜೆಪಿಯಲ್ಲಿ ಸದಾನಂದಗೌಡರಿಗೆ ಟಿಕೇಟ್ ನೀಡದೇ ಇದ್ದರೆ, ಅವರು ಕಾಂಗ್ರೆಸ್ ನಿಂದ ಸ್ಪರ್ಧಿಸುವ ಸಾಧ್ಯತೆಗಳಿವೆ, ಈ ಹಿನ್ನೆಲೆಯಲ್ಲಿ ಸಾಕಷ್ಟು ಎಚ್ಚರಿಕೆ ವಹಿಸಲಾಗುತ್ತಿದೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿವೆ.

More News

You cannot copy content of this page