Search

SCULPTOR ARUN YOGIRAJ LEFT MBA, VOLLEYBALL: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಮೈಸೂರಿನ ಅರುಣ್ ಯೋಗಿರಾಜ್ ಕೆತ್ತನೆಯ ಬಾಲರಾಮ ಪ್ರತಿಷ್ಠಾಪನೆ

ಮೈಸೂರು : ಅಯೋಧ್ಯೆಯಲ್ಲಿ ಜನವರಿ 22ರಂದು ಶ್ರೀರಾಮಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿರುವ ಬಾಲರಾಮನ ವಿಗ್ರಹವನ್ನು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರ ಶಿಲ್ಪಕಲೆಯಲ್ಲಿ ಅರಳಿದೆ.
ನಿನ್ನೆ ಸಂಕ್ರಾಂತಿಯ ದಿನದಂದೇ ವಿಗ್ರಹ ಆಯ್ಕೆಯಾಗಿರುವ ಬಗ್ಗೆ ಅಧಿಕೃತ ಘೋಷಣೆ ಹೊರಬರುತ್ತಿದ್ದಂತೆಯೇ ಮೈಸೂರಿನ ಬಸವೇಶ್ವರ ವೃತ್ತದ ಬಳಿಯಿರುವ ಅವರ ಮನೆ ಕಶ್ಯಪ ಕಲಾನಿಕೇತನದಲ್ಲಿ ಹಬ್ಬದ ಸಂಭ್ರಮ ಮನೆಮಾಡಿತ್ತು.

ತಂದೆ, ತಾತನಂತೆ ಕೆಲಸದಲ್ಲಿ ಶ್ರದ್ದಾ ಭಕ್ತಿ ಹೊಂದಿರುವ ಅರುಣ್ ರಾಮನ ಮೂರ್ತಿ ಕೆತ್ತಲು ಕಳೆದ ವರ್ಷ ಜೂನ್ ನಲ್ಲಿ ಹೋದವ ಬಂದಿದ್ದು ದಿಸೆಂಬರ್ ನಲ್ಲಿ. ಮಕ್ಕಳನ್ನು ನೋಡಿ ಹೋದವ ಮತ್ತೆ ಬಂದಿರಲಿಲ್ಲ, ಗರ್ಭಗುಡಿಯಲ್ಲಿ ರಾಮ ಕೂರುವವರೆಗೂ ಬರುವುದಿಲ್ಲ ಎನ್ನುತ್ತಿದ್ದ ಎಂದು ಆತನ ಮನೆಯವರು ತಿಳಿಸಿದ್ದಾರೆ.
ಎಂಬಿಎ ಪದವಿ ಮಾಡಿ ಕೆಲಸ, ವಾಲಿಬಾಲ್ ಬಿಟ್ಟು ಶಿಲ್ಪಿಯಾದ ಅರುಣ್
38 ವರ್ಷ ವಯಸ್ಸಿನ ಅರುಣ್ ಶಿಲ್ಪ ಕಲಾಕೃತಿ ಜತೆಗೆ ಕ್ಲೇ ಮಾಡೆಲಿಂಗ್ ಚಿತ್ರಕಲೆಯಲ್ಲೂ ನಿಪುಣರು. ಜತೆಗೆ ವಾಲಿಬಾಲ್ ಕ್ರೀಡೆಯಲ್ಲೂ ಆಸಕ್ತಿ, ಇದರಲ್ಲಿ ಹತ್ತು ಹಲವಾರು ಪ್ರಶಸ್ತಿಗಳನ್ನು ಅವರು ಪಡೆದಿದ್ದಾರೆ.

ಓದಿದ್ದು ಎಂಬಿಎ, ವಿದ್ಯಾಭ್ಯಾಸಕ್ಕೆ ತಕ್ಕಂತೆ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸವೂ ಸಿಕ್ಕಿತ್ತು. ಆದರೆ, ಆತನಿಗೆ ಕಲ್ಲಿನ ಸೆಳೆತದಿಂದ ಇವೆಲ್ಲದ್ದಕ್ಕೂ ತಿಲಾಂಜಲಿ ಇಟ್ಟು, ಕೇವಲ ಕೆತ್ತನೆಯಲ್ಲಿ, ಕಲ್ಲಿಗೆ ಮೂರ್ತರೂಪ ಕೊಡುತ್ತಾ ಬದುಕನ್ನು ಕಟ್ಟಿಕೊಂಡರು. ಅಗ್ರಹಾರದ ಗನ್ ಹೌಸ್ ಪಕ್ಕದಲ್ಲಿ ಅರುಣ್ ಅವರ ಮನೆಯ ಆವರಣದಲ್ಲಿ ಸದಾ ಶಿಲೆ ಕೆತ್ತುವ ಸದ್ದು ಕೇಳಿಬರುತ್ತಲೇ ಇದೆ.

2021ರಲ್ಲಿ ುತ್ತರಾಖಂಡದ ಕೇದಾರನಾಥದಲ್ಲಿ ಅನಾವರಣಗೊಂಡಿರುವ ಶಂಕರಾಚಾರ್ಯರ ಪ್ರತಿಮೆಯು ಅರುಣ್ ಯೋಗಿರಾಜ್ ಅವರಿಗೆ ದೊಡ್ಡ ಹೆಸರನ್ನು ತಂದುಕೊಟ್ಟಿತ್ತು. ನಂತರ ನವದೆಹಲಿಯ ಕರ್ತವ್ಯಪಥದಲ್ಲಿ ಸ್ಥಾಪನೆಯಾದ ಸುಭಾಷ್ ಚಂದ್ರ ಬೋಸ್ ಪ್ರತಿಮೆಯನ್ನು ಅವರು ನಿರ್ಮಿಸಿದರು.

ಕಳೆದ 15 ವರ್ಷಗಳಿಂದ ಶಿಲ್ಪ ಕೆತ್ತನೆಯಲ್ಲಿ ತೊಡಗಿಕೊಂಡಿರುವ ಅರುಣ್, ಅಂಬೇಡ್ಕರ್, ರಾಮಕೃಷ್ಣ ಪರಮಹಂಸ, ವಿಶ್ವೇಶ್ವರಯ್ಯ, ವಿಷ್ಣುವರ್ಧನ್, ಜಯಚಾಮರಾಜ ಒಡೆಯರ್, ಶಿವಕುಮಾರ ಸ್ವಾಮೀಜಿ ಮುಂತಾದವರ ಅದ್ಭುತ ಪ್ರತಿಮೆ ನಿರ್ಮಿಸಿದ್ದಾರೆ.

More News

You cannot copy content of this page