Search

SONG AGAINST VISHVESHWARA HEGDE KAGERI: ಕಾಗೇರಿಗೆ ಹಿಂದುಳಿದ ವರ್ಗದ ಮತ ಬೇಡವೇ..?: ಬ್ರಾಹ್ಮಣರ ಮತವಷ್ಟೇ ಸಾಕು ಹಾಡು ವೈರಲ್…!

ಕಾರವಾರ: ಉತ್ತರಕನ್ನಡ ಲೋಕಸಭಾ ಚುನಾವಣೆಗೆ ಮಾತದಾನದ ದಿನಾಂಕ ಸಮೀಪಿಸುತ್ತಿದ್ದಂತೆಯೇ ಬಿಜೆಪಿಯಲ್ಲಿ ಗೊಂದಲವೊಂದು ಸೃಷ್ಟಿಯಾಗಿದೆ. ಈ ಬಾರಿ ಬ್ರಾಹ್ಮಣ ಸಮುದಾಯ ಒಗ್ಗಟ್ಟಾಗಿ ಬ್ರಾಹ್ಮಣ ಅಭ್ಯರ್ಥಿ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಮತ ನೀಡಬೇಕು ಎಂದು ಹೇಳುವ ಶಾಸ್ತ್ರೀಯ ಸಂಗೀತ ಧಾಟಿಯ ಹಾಡೊಂದು ವೈರಲ್‌ ಆಗಿದ್ದು, ಹಾಲಿ ಸಂಸದ ಅನಂತ ಕುಮಾರ್ ಹಗಡೆ ಬೆಂಬಲಿಗರಿಂದ ಟೀಕೆಗೆ ಗುರಿಯಾಗಿದೆ. ಮೊದಲೇ ʻಬ್ರಾಹ್ಮಣ ಪಕ್ಷಪಾತಿʼ ಎಂಬ ಹಣೆಪಟ್ಟಿಗೆ ಗುರಿಯಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಈ ವಿದ್ಯಮಾನವು ಮತ್ತಷ್ಟು ಹಿನ್ನೆಡೆಯುಂಟುಮಾಡಿದೆ.

ಮಹಿಳೆಯೊಬ್ಬರು ಹಾಡಿರುವ 3.52 ನಿಮಿಷದ ಹಾಡಿನ ಫೈಲ್ ಮಾಧ್ಯಮಕ್ಕೆ ಲಭ್ಯವಾಗಿದ್ದು, ಈಗಾಗಲೇ ಈ ಹಾಡನ್ನು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಬೆಂಬಲಿಗರು ಉತ್ತರ ಕನ್ನಡದ ನೂರಾರು ವಾಟ್ಸಾಪ್‌ ಗುಂಪುಗಳಲ್ಲಿ ವೈರಲ್‌ ಮಾಡಿದ್ದಾರೆ.

ʻʻಯೋಚಿಸಿ ಮತ ಹಾಕಾವು
ಬ್ರಾಹ್ಮಣರೆಲ್ಲ ಬಿಜೆಪಿ ಆಷ್ಟಾರಾವುʼʼ ಎಂದು ಆರಂಭವಾಗುವ ಗೀತೆ, ಬ್ರಾಹ್ಮಣ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿಯನ್ನು ಬಹುಮತದಿಂದ ಗೆಲ್ಲಿಸೋಣ ಎಂದು ಹೇಳುತ್ತದೆ.

ಈ ಗೀತೆ ವೈರಲ್ ಆಗುತ್ತಿದ್ದಂತೆ, ಹಾಲಿ ಸಂಸದ ಅನಂತ ಕುಮಾರ್ ಹೆಗಡೆ ಬೆಂಬಲಿಗರು ಸಿಟ್ಟಿಗೆದ್ದಿದ್ದು, ನಿಮಗೆ ಹಿಂದುಳಿದ ವರ್ಗದವರ ಮತಗಳು ಬೇಡವೇ ಎಂದು ಪ್ರಶ್ನಿಸಿದ್ದಾರೆ. ಈ ನಡುವೆ ಬ್ರಾಹ್ಮಣರು ಒಂದಾಗಿ ಕಾಗೇರಿ ಗೆಲ್ಲಿಸಿ ಎಂಬ ಹಾಡು ಉರಿಯವ ಬೆಂಕಿಗೆ ತುಪ್ಪ ಸುರಿದಂತೆ ಆಗಿದೆ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಿರುವ ಬ್ರಾಹ್ಮಣ ಸಮುದಾಯದ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಕಾಂಗ್ರೆಸ್ ನಿಂದ ಸ್ಪರ್ಧಿಸಿರುವ ಹಿಂದುಳಿದ ವರ್ಗದ ಮರಾಠಾ ಸಮುದಾಯದ ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.

ಹಾಲಿ ಸಂಸದ ಅನಂತ ಕುಮಾರ್ ಹೆಗಡೆ ಇದುವರೆಗೆ ವಿಶ್ವೇಶ್ವರ ಹೆಗಡೆ ಕಾಗೇರಿ ಪರವಾಗಿ ಚುನಾವಣಾ ಪ್ರಚಾರಕ್ಕೆ ಇಳಿದಿಲ್ಲ ಮಾತ್ರವಲ್ಲ, ಅಭ್ಯರ್ಥಿ ಪರವಾಗಿ ಯಾವುದೇ ಹೇಳಿಕೆಯನ್ನೂ ನೀಡಿಲ್ಲ. ಹೆಗಡೆ ಬೆಂಬಲಿಗರಲ್ಲಿ ಒಂದು ಗುಂಪು ಡಾ.ಅಂಜಲಿ ಅವರ ಪರವಾಗಿ ಕೆಲಸ ಮಾಡುತ್ತಿದ್ದರೆ, ಮತ್ತೊಂದು ಗುಂಪು ಈ ಚುನಾವಣೆಯಲ್ಲಿ ತಟಸ್ಥವಾಗಿರಲು ನಿರ್ಧರಿಸಿದೆ. ಇದಲ್ಲದೆ ಸೊಶೀಯಲ್ ಮೀಡಿಯಾದಲ್ಲಿ ಬ್ರಾಹ್ಮಣರೂ ಮಾತ್ರ ವೋಟ್ ಹಾಕಿದ್ರೇ ಗ್ರಾಮ ಪಂಚಾಯತಿ ಮೇಂಬರ್ ಕೂಡ ಆಗಲ್ಲ ಎಂದು ಕಾಗೇರಿ ವಿರುದ್ಧ ಬಹುದೊಡ್ಡ ವಿರೋಧವೇ ನಡೆದಿದೆ.

More News

You cannot copy content of this page