Search

DASARA FESTIVAL: ಬರಗಾಲವಿದ್ದರೂ ನಮ್ಮ ಸಂಪ್ರದಾಯ ಮತ್ತು ವೈಭವಕ್ಕೆ ಕೊರತೆ ಇಲ್ಲದಂತೆ ಅರ್ಥಪೂರ್ಣ ದಸರಾ ಆಚರಿಸಲಾಗುವುದು : ಸಿಎಂ ಸಿದ್ದರಾಮಯ್ಯ

ಮೈಸೂರು : ಬರಗಾಲವಿದ್ದರೂ ನಮ್ಮ ಸಂಪ್ರದಾಯ ಮತ್ತು ವೈಭವಕ್ಕೆ ಕೊರತೆ ಇಲ್ಲದಂತೆ ಅರ್ಥಪೂರ್ಣ ದಸರಾ ಆಚರಿಸಲಾಗುವುದು. ನಮ್ಮ ಪರಂಪರೆ ಮತ್ತು ಹಿರಿಮೆಯನ್ನು ಜಗತ್ತಿಗೆ ಸಾರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿ ದೇವಿಗೆ ಅಗ್ರ ಪೂಜೆ ಸಲ್ಲಿಸುವ ಮೂಲಕ ಸಾಂಪ್ರದಾಯಿಕವಾಗಿ ಚಾಲನೆ ನೀಡಿ ಮಾತನಾಡಿದರು.

ಕನ್ನಡ ನಾಡಿನ ಸಮೃದ್ಧಿ, ಪ್ರಗತಿ, ಸಂಸ್ಕೃತಿ ಮತ್ತು ವೈಭವವನ್ನು ದಸರಾ ಮೂಲಕ ಜಗತ್ತಿಗೆ ಸಾರುವ ಕೆಲಸವನ್ನು ನಾವು ಮಾಡುತ್ತೇವೆ. ಸಾಂಸ್ಕೃತಿಕವಾಗಿ ಬಹಳ ಶ್ರೀಮಂತ ನಾಡು ನಮ್ಮದು. ನಮ್ಮ ಜನ ಬಹಳ ಸುಸಂಸ್ಕೃತರು. ಪ್ರೀತಿ ಹಂಚುವವರು. ಎಲ್ಲಾ ಜಾತಿ ಧರ್ಮದವರನ್ನು ಅತ್ಯಂತ ಪ್ರೀತಿಯಿಂದ, ಘನತೆಯಿಂದ ನಡೆಸಿಕೊಳ್ಳುವುದು ನಮ್ಮ ಧರ್ಮ ಮತ್ತು ಕರ್ತವ್ಯ ಎಂದರು.

ರಾಜ್ಯದ 116 ತಾಲ್ಲೂಕುಗಳಲ್ಲಿ ಮಳೆ ಇಲ್ಲದೆ ತೀವ್ರ ಬರಗಾಲದ ಸ್ಥಿತಿ ಇದೆ. ಮಳೆ ಇಲ್ಲದೆ ನಾಡಿನ ರೈತ ಕುಲ, ನಾಡಿನ ಜನತೆ ಕಷ್ಟದಲ್ಲಿದ್ದಾರೆ. ಆದ್ದರಿಂದ ಅದ್ದೂರಿ ಇಲ್ಲದ ವೈಭವಕ್ಕೆ ಕೊರತೆ ಇಲ್ಲದ ಅರ್ಥಪೂರ್ಣ ದಸರಾ ಆಚರಿಸಬೇಕು ಎನ್ನುವುದು ನಮ್ಮ ಉದ್ದೇಶ ಎಂದರು.
ಖ್ಯಾತ ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ಸಾಂಪ್ರದಾಯಕವಾಗಿ, ಅರ್ಥಪೂರ್ಣವಾಗಿ ಉದ್ಘಾಟಿಸಿದರು.
ಪಲ್ಲಕ್ಕಿಯಲ್ಲಿ ಅಲಂಕೃತ ಗೊಂಡಿದ್ದ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ಸಂಪ್ರದಾಯದಂತೆ ಪೂಜೆ ಸಲ್ಲಿಸಿ ನಾಡಿನಲ್ಲಿ ಉತ್ತಮ ಮಳೆ ಬೆಳೆಯಾಗಲಿ ಎಂದು ಪ್ರಾರ್ಥಿಸಿದರು.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ನೇತೃತ್ವದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಜಿ.ಟಿ.ದೇವೇಗೌಡ ಅಧ್ಯಕ್ಷತೆ ವಹಿಸಿದ್ದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮೈಸೂರು ಮೇಯರ್ ಶಿವಕುಮಾರ್, ಇಂಧನ ಸಚಿವ ಕೆ.ಜೆ.ಜಾಜ್೯, ಪಶುಸಂಗೋಪನಾ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಆಹಾರ ನಾಗರೀಕ ಫೂರೈಕೆ ಸಚಿವ ಕೆ.ಎಚ್.ಮುನಿಯಪ್ಪ, ಸಂಸದ ಪ್ರತಾಪ್ ಸಿಂಹ, ಶಾಸಕರುಗಳಾದ ತನ್ವೀರ್ ಸೇಠ್, ಎ.ಆರ್.ಕೃಷ್ಣಮೂರ್ತಿ, ಟಿ.ಎಸ್.ಶ್ರೀವತ್ಸ,ವ ಸದಸ್ಯ ಮರಿತಿಬ್ಬೇಗೌಡ, ಉಪ ಮೇಯರ್ ಡಾ.ಜಿ.ರೂಪ, ಜಿಲ್ಲಾಧಿಕಾರಿ ದಸರಾ ವಿಶೇಷಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಜಿ.ಪಂ. ಸಿಇಓ ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ನಗರಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಶರೀಫ್ ಸೇರಿ ಹಲವು ಪ್ರಮುಖರು ವೇದಿಕೆಯಲ್ಲಿದ್ದರು.

More News

You cannot copy content of this page