Search

CRIMINAL FROM ANOTHER PERSPECTIVE: ದಾವೂದ್ ಇಬ್ರಾಹಿಂ…ನೀಚಾತಿನೀಚ ಕ್ರಿಮಿನಲ್ ವ್ಯಕ್ತಿಯನ್ನು ಇನ್ನೊಂದು ದೃಷ್ಟಿಕೋನದಿಂದ ನೋಡುವ ಪ್ರಯತ್ನ…

————-ವಿವೇಕಾನಂದ ಎಚ್ ಕೆ,, ಹಿರಿಯ ಪತ್ರಕರ್ತರು————
ಒಮ್ಮೆ ಕೇಂದ್ರ ಸಚಿವರು ಮತ್ತು ಮಹಾರಾಷ್ಟ್ರದವರೇ ಆದ ನಿತಿನ್ ಗಡ್ಕರಿ ಅವರು ಹೀಗೆ ಹೇಳುತ್ತಾರೆ ” ಸ್ವಾಮಿ ವಿವೇಕಾನಂದ ಮತ್ತು ದಾವೂದ್ ಇಬ್ರಾಹಿಂ ಅವರ ಐಕ್ಯೂ (ಬುದ್ದಿ ಮಟ್ಟದ ಕೋಷ್ಟಕ ) ಒಂದೇ. ಆದರೆ ವಿವೇಕಾನಂದರು ಅದನ್ನು ಒಳ್ಳೆಯದಕ್ಕೆ ಉಪಯೋಗಿಸಿದರು, ದಾವೂದ್ ಕೆಟ್ಟದ್ದಕ್ಕೆ ಉಪಯೋಗಿಸಿದ ” ( ನಂತರ ಈ ಹೋಲಿಕೆ ಕೆಲವರ ಆಕ್ಷೇಪಕ್ಕೆ ಕಾರಣವಾಯಿತು )
ದಂತಚೋರ ವೀರಪ್ಪನ್ ಕಾರ್ಯಾಚರಣೆಯಲ್ಲಿದ್ದ ಅಧಿಕಾರಿಯೊಬ್ಬರು ಖಾಸಗಿಯಾಗಿ ಮಾತನಾಡುತ್ತಾ ” ವೀರಪ್ಪನ್ ನನ್ನು ಭಾರತ – ಪಾಕಿಸ್ತಾನದ ಗಡಿಯಲ್ಲಿ ಭಾರತದ ಕಾರ್ಯಾಚರಣೆ ಪಡೆಯ ಮುಖ್ಯಸ್ಥನನ್ನಾಗಿ ಮಾಡಿದರೆ ಆತ ನಿಶ್ಚಿತವಾಗಿ ಪಾಕಿಸ್ತಾನಕ್ಕೆ ಮಣ್ಣು ಮುಕ್ಕಿಸುವುದು ಶತಸಿದ್ದ. ಅಷ್ಟು ಅದ್ಬುತ ಗೆರಿಲ್ಲಾ ಯುದ್ಧ ತಂತ್ರಗಾರ ” ಎಂದರು…
” ಚಾರ್ಲ್ಸ್ ಶೋಭರಾಜ್ ” ಎಂಬ ವಂಚಕನ ವಂಚನೆಯ ಕಲೆಯೇ ಜಗದ್ವಿಖ್ಯಾತವಾಗಿದೆ. ಆತನ ಮೇಲೆ ನಟ ಅಮಿತಾಭ್ ಬಚ್ಚನ್ ಸಿನಿಮಾ ಸಹ ಮಾಡಿದ್ದಾರೆ…..
ಈ ಕ್ರಿಮಿನಲ್ ಗಳ ಐಕ್ಯೂ ಉದಾಹರಣೆಗಳೊಂದಿಗೆ…..

ಒಬ್ಬ ಸಾಮಾನ್ಯವಾಗಿ ಹಿಂದಿನ ಬಾಂಬೆಯ ಡೊಂಗ್ರಿಯಲ್ಲಿ ಹುಟ್ಟಿದ ದಾವೂದ್ ಇಬ್ರಾಹಿಂ ಇಂದಿನವರೆಗೆ ಆತನ ಆಸಕ್ತಿಯ ಕ್ಷೇತ್ರದಲ್ಲಿ ಸಾಧಿಸಿದ ಸಾಧನೆ ಸಹ ಅತ್ಯಂತ ಮಹತ್ವದ್ದು. ಆದರೆ ಅದು ಅತ್ಯಂತ ಅಮಾನವೀಯ, ಹಿಂಸಾತ್ಮಕ ಮತ್ತು ದುಷ್ಟತನದ ಪರಮಾವಧಿ ಹಾಗು ಅಂತಿಮವಾಗಿ ದೇಶದ್ರೋಹ ಎಂಬುದು ವಾಸ್ತವ…….
ಮುಂಬಯಿ ಕಡಲ ತೀರದ ಬೃಹತ್ ಅಲೆಗಳ ನಡುವೆ ದೋಣಿ – ಹಡಗುಗಳಲ್ಲಿ ಸಾಗಾಟವಾಗುತ್ತಿದ್ದ ಚಿನ್ನದ ಕಳ್ಳಸಾಗಣೆಯಿಂದ ಪ್ರಾರಂಭವಾದ ದಾವೂದ್ ಬದುಕಿನ ಪಯಣ ಈ ಕ್ಷಣದಲ್ಲಿ ಪಾಕಿಸ್ತಾನ ಸರ್ಕಾರ ಆತನಿಗೆ ಭದ್ರತೆ ಒದಗಿಸುವಷ್ಟು ಪ್ರಮುಖ ವ್ಯಕ್ತಿಯಾಗಿ ಬೆಳೆದಿದ್ದಾನೆ. 2011 ರಲ್ಲಿ ಅಮೆರಿಕದ ಗುಪ್ತಚರ ಸಂಸ್ಥೆ FBI ವಿಶ್ವದ ಅತ್ಯಂತ ಕುಖ್ಯಾತ ಭಯೋತ್ಪಾದಕರು ಮತ್ತು ಮೋಸ್ಟ್ ವಾಂಟೆಡ್‌ ಹತ್ತು ಜನರ ಪಟ್ಟಿಯಲ್ಲಿ ದಾವೂದ್ ಮೂರನೇ ಸ್ಥಾನದಲ್ಲಿ ಇದ್ದಾನೆ. ಇವನ ಸುಳಿವು ನೀಡಿದವರಿಗೆ ಕೋಟ್ಯಾಂತರ ಹಣದ ಬಹುಮಾನ ಘೋಷಿಸಲಾಗಿದೆ. ಅಷ್ಟೊಂದು ಕೆಟ್ಟ ಕಾರಣದಿಂದಾಗಿಯೇ ಎತ್ತರದ ಸ್ಥಾನ ತಲುಪಿದ್ದಾನೆ…
ಹಾಜಿ ಮಸ್ತಾನ್ ಎಂಬ ಭೂಗತ ಪಾತಕಿಯ ನೆರಳಿನಲ್ಲಿ ಕಳ್ಳಸಾಗಣಿಕೆದಾರನಾಗಿ, ಅದಕ್ಕೆ ಪೂರಕವಾಗಿ ರೌಡಿಸಂ ಮಾಡುತ್ತಾ ಕೊನೆಗೆ ಒಂದು ದಿನ ಮುಂಬಯಿ ಭೂಗತ ಜಗತ್ತಿನ ಅನಭಿಷಿಕ್ತ ಸಾಮ್ರಾಟನಾಗಿ ಮಹಾರಾಷ್ಟ್ರ ಮಾತ್ರವಲ್ಲ ಇಡೀ ದೇಶದಲ್ಲಿ ಅತ್ಯಂತ ನಟೋರಿಯಸ್ ಕ್ರಿಮಿನಲ್ ಆಗುತ್ತಾನೆ…..

ಇಲ್ಲಿ ಪೋಲೀಸ್ ಮತ್ತು ವಿರೋಧಿಗಳ ಒತ್ತಡ ಹೆಚ್ಚಾದಾಗ ದುಬೈಗೆ ಪಲಾಯನ ಮಾಡಿ ಅಲ್ಲಿಂದಲೇ ” ಡಿ ಕಂಪನಿ ” ಯ ಹೆಸರಿನಲ್ಲಿ ಇಲ್ಲಿನ ಭೂಗತ ಜಗತ್ತನ್ನು ಆಳುತ್ತಾನೆ. ಅದು ಯಾವ ಹಂತಕ್ಕೆ ತಲುಪುತ್ತದೆ ಎಂದರೆ ಬಹುತೇಕ ಹಿಂದಿ ಚಿತ್ರರಂಗವನ್ನು ತಾನೇ ನಿಯಂತ್ರಿಸುವ ಮಟ್ಟಕ್ಕೆ ಮತ್ತು ಮುಂದೆ ಅದನ್ನು ಮೀರಿ ಇಡೀ ವಿಶ್ವ ಕ್ರಿಕೆಟ್ ಬೆಟ್ಟಿಂಟ್ ದೊರೆಯಾಗಿ ಹಣದ ಹೊಳೆಯನ್ನೇ ಹರಿಸುತ್ತಾನೆ. ರಿಯಲ್ ಎಸ್ಟೇಟ್ ದಂಧೆಯಲ್ಲಿಯೂ ಸಾಕಷ್ಟು ಹಣ ಮಾಡುತ್ತಾನೆ. ಕ್ರಿಕೆಟ್ ಪಂದ್ಯಗಳ ಫಲಿತಾಂಶಗಳನ್ನೇ ಉಲ್ಟಾ ಪಲ್ಟಾ ಮಾಡುತ್ತಾನೆ. ಸರ್ಕಾರಗಳನ್ನೇ ಬೆದರಿಸುತ್ತಾನೆ. ರಾಜಕಾರಣಿಗಳ ಒಡನಾಟ ಸಂಪಾದಿಸುತ್ತಾನೆ. ಅನೇಕ ಪೋಲೀಸ್ ಅಧಿಕಾರಿಗಳೇ ಇವನಿಗೆ ಏಜೆಂಟ್ ಆಗಿ ಕೆಲಸ ಮಾಡುತ್ತಾರೆ…..
ಅಲ್ಲಿಯವರೆಗೂ ದಾವೂದ್ ಒಬ್ಬ ಭೂಗತ ಪಾತಕಿ ಮಾತ್ರ. ತನ್ನ ಸಮಕಾಲೀನ ಪಾತಕಿಗಳಿಗಿಂತ ಎತ್ತರದ ಸ್ಥಾನ ತಲುಪುತ್ತಾನೆ. ಆದರೆ ತದನಂತರ ಪಾಕಿಸ್ತಾನದ ಐಎಸ್ಐ ಜೊತೆಗೂಡಿದ ಈ ನರಹಂತಕ ತನ್ನನ್ನು ಹುಟ್ಟಿಸಿ ಸಾಕಿ ಸಲಹಿದ ಈ ಭೂಮಿಗೇ ದ್ರೋಹ ಬಗೆಯುವಂತೆ ಮುಂಬಯಿ ಸ್ಪೋಟದ ರೂವಾರಿಯಾಗಿ ಅನೇಕ ಸಾವು ನೋವುಗಳಿಗೆ ಕಾರಣವಾಗಿ ಅನ್ನ ತಿಂದ ಮನೆಗೆ ದ್ರೋಹ ಬಗೆದು ದೇಶ ದ್ರೋಹಿಯಾಗುತ್ತಾನೆ. ಕ್ಷಮಿಸಲಾರದ ತಪ್ಪು ಮಾಡುತ್ತಾನೆ……..

ಇದೀಗ ಸುಮಾರು 68 ರ ವಯಸ್ಸಿನಲ್ಲಿ ವಯೋಸಹಜ ಖಾಯಿಲೆಯಿಂದ ‌ಪಾಕಿಸ್ತಾನದ ಕರಾಚಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂಬ ಸುದ್ದಿಯ ಜೊತೆಗೆ ಇನ್ನಿತರ ಗಾಳಿ ಸುದ್ದಿಗಳು ಹರಿದಾಡುತ್ತಿವೆ……
ಸೋಜಿಗ ಮತ್ತು ವಿಷಾದದ ಸಂಗತಿಯೆಂದರೆ, ಇಂತಹ ‌ಅತ್ಯಂತ ಭಯಾನಕ ವ್ಯಕ್ತಿಗಳನ್ನು ಸಹ ಈ ಭೂಮಿ, ಈ ಧರ್ಮ, ಈ ದೇವರು, ಈ‌ ಕಾನೂನುಗಳು, ಈ ಜನರು ಏನೂ ಮಾಡಲು ಸಾಧ್ಯವಾಗದೆ ಸಹಿಸಿಕೊಳ್ಳುತ್ತಿರುವುದು ಹೇಗೆ ಎಂಬ ಪ್ರಶ್ನೆ ಕಾಡುತ್ತದೆ. ಅಪರಾಧ ಚಟುವಟಿಕೆಗಳನ್ನೇ ಮಾಡುತ್ತಾ ದಾವೂದ್ ಮತ್ತು ಆ ರೀತಿಯ ವ್ಯಕ್ತಿಗಳು ಅತ್ಯಂತ ಉನ್ನತ ಸ್ಥಾನಕ್ಕೆ ಏರುವುದು ಮತ್ತು ತಮ್ಮ ಪೂರ್ಣ ಬದುಕನ್ನು ಅನುಭವಿಸುವುದು ಹೇಗೆ ಸಾಧ್ಯವಾಗುತ್ತದೆ…..
ಪರೀಕ್ಷೆಯಲ್ಲಿ ನಕಲು ಮಾಡಿದರೆ, ದ್ವಿಚಕ್ರ ವಾಹನ ಚಲಾಯಿಸುವಾಗ ಹೆಲ್ಮೆಟ್ ಹಾಕದಿದ್ದರೆ, ಯಾರಿಗೋ ಬೆದರಿಕೆ ಹಾಕಿದರೆ ಪೋಲೀಸರು ನಮ್ಮನ್ನು ದಂಡಿಸುತ್ತಾರೆ. ಆದರೆ ಇದೇ ನೆಲದಲ್ಲಿ ದಾವೂದ್ ರೀತಿಯವರು ಕೊಲೆಗಳು ಸೇರಿ ಕಾನೂನಿಗೆ ವಿರುದ್ಧವಾಗಿ ಇಡೀ ಜೀವನ‌ ಸಾಗಿಸುತ್ತಾರೆ. ಅವರಿಗೆ ಮಾತ್ರ ಏನೂ ಆಗುವುದಿಲ್ಲ. ದೇವರು ಸಹ ಅವರ ಪರವಾಗಿ ನಿಲ್ಲುತ್ತಾನೆ ಎಂಬ ಅನುಮಾನಿಸಲೂ‌ ಸಾಧ್ಯವಿದೆಯಲ್ಲವೇ….

ದಾವೂದ್ ಇಬ್ರಾಹಿಂ ಎಂಬ ದೇಶದ್ರೋಹಿಯ ಬದುಕು ಬಹುತೇಕ ಅಂತಿಮ ಹಂತಕ್ಕೆ ಬಂದು ನಿಂತಿದೆ. ಆದರೆ ಈ ಸಮಾಜ ನಿಜವಾಗಿಯೂ ಯಾರನ್ನು ಪೋಷಿಸಬೇಕು, ಯಾರನ್ನು ತಿರಸ್ಕರಿಸಬೇಕು ಎಂಬುದನ್ನು ಸ್ಪಷ್ಟವಾಗಿ ಗುರುತಿಸಬೇಕು. ಆತ್ಮಾವಲೋಕನ ಮಾಡಿಕೊಳ್ಳಬೇಕು. ಒಂದು ಬೃಹತ್ ದೇಶದ ಆಡಳಿತ ವ್ಯವಸ್ಥೆ ಒಬ್ಬ ದುಷ್ಟ ಬೆಳೆಯುವ ವಾತಾವರಣ ಸೃಷ್ಟಿಸಿದೆ ಎಂದರೆ ಆ ದೇಶದ ಜನರ ನೈತಿಕತೆಯನ್ನು ಪ್ರಶ್ನೆ ಮಾಡಬೇಕಾಗುತ್ತದೆ…..
ಜೊತೆಗೆ ಒಬ್ಬ ಸಾಮಾನ್ಯ ವ್ಯಕ್ತಿ ದುಷ್ಟ – ಕ್ರಿಮಿನಲ್ ವಿಷಯದಲ್ಲಿ ಸಹ ವಿಶ್ವದ ಮೋಸ್ಟ್ ವಾಂಟೆಡ್‌ ಆಗಿ ಬದುಕುಳಿಯುತ್ತಾನೆ ಎಂಬುದು ಗಮನಾರ್ಹ…….
ಇದು ನಮಗೆ ಪಾಠ ಮತ್ತು ಎಚ್ಚರಿಕೆಯಾಗಲಿ ಎಂದು ಆಶಿಸುತ್ತಾ…….

More News

You cannot copy content of this page