Search

LUCKY, LUCKY HOUSE: ಮುಂದಿನ ಮುಖ್ಯಮಂತ್ರಿಗೆ ಈ ಮನೆ ಅದೃಷ್ಟ ತರಲಿದೆಯಾ…!

……………ವೈ ಜಿ.ಅಶೋಕ್ ಕುಮಾರ್, ಹಿರಿಯ ಪತ್ರಕರ್ತರು……………….
ಇದು ಕುಮಾರಕೃಪಾ ರಸ್ತೆಯಲ್ಲಿ ಗಾಂಧಿ ಭವನದ ಸಾಲಿನಲ್ಲಿ ಇರುವ ಕೊನೆಯ ಮನೆ. ಶೇಷಾದ್ರಿಪುರಂ ಕಡೆಯಿಂದ ಬಂದರೆ ರೈಲ್ವೇ ಬ್ರಿಡ್ಜ್ ದಾಟಿದ ತಕ್ಷಣ ಎಡ ತಿರುವಿನಲ್ಲಿ ಎದುರಿಗೇ ಸಿಗುವ ಮನೆ. ಈ ಮನೆ ಯಾಕೆ ಫೇಮಸ್ಸು ಗೊತ್ತಾ….
ಸಿದ್ದರಾಮಣ್ಣ ಈ ಸರ್ಕಾರಿ ಮನೆಯಲ್ಲಿ ವಾಸ್ತವ್ಯ ಹೂಡಿದ್ದರಿಂದಲೇ ಎರಡು ಸಲ ಮುಖ್ಯಮಂತ್ರಿ ಆದರು. ಎರಡು ಸಲ ವಿರೋಧ ಪಕ್ಷದ ನಾಯಕರಾದರು ಎಂದು ಹೇಳಿದ್ದು ನಿಮ್ಮಾಣೆ ನಾನಲ್ಲ, ನಮ್ ನರಸೀಪುರದ ರೇವಣ್ಣನವರು..!

ಯಾಕೆಂದರೆ ರೇವಣ್ಣನವರ ಅತ್ಯಂತ ವಿಶ್ವಾಸಾರ್ಹ ನಿವಾಸವಿದು ಅವ್ರು ಮಂತ್ರಿಯಾಗಿ ಇಲ್ಲಿದ್ದರು.ಅವರ ಧರ್ಮಪತ್ನಿ ಭವಾನಿ ರೇವಣ್ಣನವರು ಇಲ್ಲಿ ಸಾಕಷ್ಟು ಸಲ ಸತ್ಯನಾರಾಯಣ ಸ್ವಾಮಿ ಪೂಜೆ ಮಾಡಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿಯೂ ಸೇರಿದಂತೆ ಉನ್ನತ ಅಧಿಕಾರಿಗಳು ಮತ್ತವರ ಕುಟುಂಬ ವರ್ಗದವರಿಗೆ ಸತ್ಯನಾರಾಯಣ‌ ಸ್ವಾಮಿ ಪ್ರಸಾದ ನೀಡಿ ಮನೆಯೊಳಗೆ ಕರೆದು ಕಡತಗಳ ವಿಲೇವಾರಿ ಮಾಡಿಸಿದ್ದರು.
ಮನೆ ಹಿಂದೆ ಒಂದು ಹಸು ಕರು ಕಟ್ಟಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆದಾಗಲೂ ಹಸುವನ್ನು ಮನೆಯೊಳಗೆ ನುಗ್ಗಿಸಿದ್ದಾರೆ. ಕುಮಾರಸ್ವಾಮಿ ಎರಡನೇ ಸಲ ಮುಖ್ಯಮಂತ್ರಿಯಾಗಿದ್ದಾಗ ಆರಂಭ ಕಾಲದಲ್ಲಿ ನಮ್ಮ ಸಿದ್ದರಾಮಣ್ಣಂಗೆ ಮಾಡಕ್ಕೆ ಕೆಲ್ಸ ಇರಲಿಲ್ಲ.
ಸರಿ ಒಂದಿನ ಬೆಳಿಗ್ಗೆ ಹತ್ತು ಗಂಟೆಗೆ ಅಸೆಂಬ್ಲಿಗೆ ಬಂದು ಬಿಟ್ರು… ಆವತ್ತು ಅಸೆಂಬ್ಲಿ ಇದ್ದದು ಹನ್ನೊಂದು ಗಂಟೆಗೆ…. ಜೊತೆಗೆ ನಮ್ ಮಾಧ್ಯಮ ಕಾರ್ಯದರ್ಶಿ ಕುರುಬರ್ ಪೇಟೆನೂ ಇತ್ತು. ನಾನು ಬೇರೆ ಎದುರಿಗೇ ಸಿಕ್ ಬಿಟ್ಟೆ.

ಏ….ಬನ್ರಿ….. ಕಾಪೀ ಕುಡಿಯನಾ ಅಂತು ಸಿದ್ರಾಮಣ್ಣ.
ನಾನು ಸ್ವಲ್ಪ ಅಂಜುತ್ತಲೇ ಪಕ್ಕದಲ್ಲಿ ಸೋಫಾದಲ್ಲಿ ಕೂತೆ… ಯಾಕಂದ್ರೆ ಹಳ್ಳಿಹಕ್ಕಿ ಜೆಡಿಎಸ್ ಸೇರಿ ಹುಣಸೂರಿನಿಂದ ಗೆದ್ದಿದ್ದಕ್ಕೂ ನನಗೂ ನಂಟು ಕಟ್ಟಿ ಸಿದ್ದರಾಮಣ್ಣನ ಕಿವಿ ಕಚ್ಚಿದ್ದರು.ಅದೇ ವಾರದ ಹಿಂದೆ ನಾನು ಎದುರಿಗೇ ಸಿಕ್ಕಿದ್ರೂ ಮೊಖ ನೋಡಿರ್ನಿಲ್ಲ.
“ಯಾವುದೇ ಸಿಟ್ಟು ಮತ್ತು ಪ್ರೀತಿಯನ್ನು ಬಹಳ ಕಾಲ ಮುಂದುವರೆಸೋದು ಸಿದ್ದರಾಮಣ್ಣಂಗೆ ಒಗ್ಗಿ ಬರಲ್ಲ” ಅನ್ನೋದು ನಂಗೆ ವೆಂಕಟೇಶನಷ್ಟೇ ಗೊತ್ತಿತ್ತು ಸಿದ್ದರಾಮಣ್ಣ ಸಪ್ಲೈಯರ್ ಕರೆದು ನೋಡಪ್ಪಾ ನಂಗೂ ಇವರ್ಗೂ ಗ್ರೀನ್ ಟೀ ಕೊಡು ಮಿಕ್ಕವರಿಗೆ ಏನು ಬೇಕೋ ಕೇಳು ಅಂತ ಆರ್ಡರ್ ಮಾಡಿದ್ರು… ಟೀ ಬರುತ್ತಲೇ ಮೆಲ್ಲಗೆ ಮಾತಿಗಿಳಿದರು.
ಏನ್ರೀ ನಿಮ್ಮ ಎಂಎಲ್ಎ ಮಂತ್ರಿ ಆದ್ರೂ ಹೊಳೆನರಸೀಪುರದಿಂದಲೇ ಓಡಾಡ್ತರಂತೆ ಹೌದಾ ಅಂದ್ರು ಸಿದ್ದರಾಮಣ್ಣ.. ಸರ್ ರೇವಣ್ಣನವರ ಮನೆ ಇನ್ನೂ ರೆಡಿಯಾಗಿಲ್ಲ ಅಂದೆ. ನಾನಿದ್ದುದು, ಮದೇವಪ್ಪ ಇದ್ದ್ ಮನೆ ಐತಲ್ಲ ಅಂದ್ರು. ಸರ್ ಅದು ಸ್ವಲ್ಪ ಸ್ವಚ್ಚತೆ ಮಾಡಿಸ್ತಿದಾರೆ ಅಂದೆ.

ಆಂ……ಅಲ್ಲಪ್ಪ….. ಆ ಮನೆನಾ ಮಾದೇವಪ್ಪ ಚೆನ್ನಾಗೇ ರಿನೋವೇಶನ್ ಮಾಡಿಸಿದ್ನಲ್ಲ…… ಈಗ ರಿನೋವೇಶನ್ ಮಾಡ್ತಿಲ್ಲ ಸ್ವಚ್ಛ ಮಾಡುಸ್ತಾವ್ರೇ…. ಅಂದೆ. ಏನ್ರೀ ಹಂಗಂದ್ರೆ ಅಂತು ಟಗರು.. ಅದೇ ಸರ್ ಮಾದೇವಪ್ಪ ಇದ್ದ ಮನೆ….. ಅವರು ಎಲೆಕ್ಷನ್ ಸೋತರಲ್ಲ ಅದಕ್ಕೆ ಸ್ವಚ್ಛ ಮಾಡಿಸ್ಕೊಂಡು ಹಸು ಕರು ನುಗ್ಗಿಸಿ ಆಮೇಲೆ ಗೃಹ ಪ್ರವೇಶ ಮಾಡ್ತಾರೆ ಅಂದೆ.
ನಾನೇನೂ ಅವೆಲ್ಲ ಮಾಡ್ಸಿರ್ನಿಲ್ಲ ನಾನು ಶಿಎಂ ಆಗ್ಲೇ ಇಲ್ವ… ಅದೆಲ್ಲ ಮೂಡ್ನಂಬಿಕೆ ಅಂತು ಮಾಜಿ ಸಮಾಜವಾದಿ… ನೀವೂ ಅಧಿಕಾರ ಕಳ್ಕಂಡ್ರಲ್ಲ ಸರ್ ಅಂದೆ…. ಇರಲಿ ಬುಡಿ ಅವರವರ ನಂಬ್ಕೇ…. ಅಷ್ಟು ಹೊತ್ತಿಗೆ ಮೈಸೂರಿನ ಕೋಳಿ ಮರ್ಸಾಮಿ, ಬೈರ್ತೀ ಬಸ್ರಾಜು, ಮಿಸ್ಟರ್ ಮಳವಳ್ಳಿ ಗಳು ಬಂದಿದ್ದರಿಂದ ನಾನು ಜಾಗ ಬಿಟ್ಟೆ…
ಸಿದ್ರಾಮಣ್ಣನೂ ಎದ್ರು… ನಮ್ ಮೀಡಿಯಾ ಹುಡುಗೀರು ಸಿದ್ರಾಮಣ್ಣನ್ ಜೊತೆ ಫೋಟೋ ಸೆಫ್ಲೀಗೆ ಮುಗಿ ಬಿದ್ದವು.ಅವನ್ನು ಮೇಲಿಂದ ಕೆಳಗಂಟ ನೋಡ್ತಾ ಸಿದ್ದರಾಮಣ್ಣ ಪೋಸ್ ಕೊಟ್ರು….. ಸಿದ್ದರಾಮಣ್ಣನ ಮುಖ ಅರಳಿತು.

ಈಗ ಈ ಮನೆ ಮತ್ತೆ ರಿನೋವೇಶನ್ ಆಗ್ತಾ ಇದೆ ಅನ್ನೋದು ವಿಶ್ಯ, ಮಾನ್ಯ ಉಪ ಮುಖ್ಯಮಂತ್ರಿ ಡಿಕೆ ಸಾಹೇಬ್ರು ಅಧಿಕಾರ ಹಿಡಿದ ಮರುದಿನವೇ ಈ ಮನೆ ಅಲಾಟ್ ಮಾಡಿಸಿಕೊಂಡರೂ ಇನ್ನು ಪ್ರವೇಶ ಆಗಿಲ್ಲ. ಅವರಿಗೂ ಇದು ಅದೃಷ್ಟ ತರುವ ಮನೆ ಎಂಬುದು ಗೊತ್ತಿದೆ.ಅವರು ವಾಸ ಮಾಡದಿದ್ದರೂ ಸುಸಜ್ಜಿತ ಗೃಹ ಕಛೇರಿಯಂತೂ ಆಗಲಿದೆ.
ಹಂಗಂತ ಇದೇ ಮನೆಯಲ್ಲಿದ್ದು ಧರ್ಮ ಸಿಂಗ್ ಮುಖ್ಯಮಂತ್ರಿ ಆದರು. ರೇವಣ್ಣ ಎರಡು ಸಲ ಮಂತ್ರಿ ಆದರು.ಮೊದಲು ಮಂತ್ರಿ ಆದಾಗ ದೇವೇಗೌಡರು ಪ್ರದಾನಿ ಆಗಿ ದೆಹಲಿಗೆ ಹೋದಾಗ ಖಾಲಿ ಆಗಲು ಬಿಡದೆ “ಅನುಗ್ರಹ”ದಲ್ಲಿದ್ದರು. ಪಕ್ಕದಲ್ಲೇ ಮುಖ್ಯಮಂತ್ರಿ ಪಟೇಲರ ಕಾವೇರಿ ನಿವಾಸ…
ಸಿದ್ದರಾಮಣ್ಣ ಎರಡು ಸಲ ಮುಖ್ಯಮಂತ್ರಿಯಾದರು. ಕಾವೇರಿಗೆ ಶಿಫ್ಟ್ ಆದರು. ಅದಕ್ಕೂ ಮುನ್ನ ಮಂತ್ರಿ ನಾಗೇಗೌಡ, ಆಮೇಲೆ ಮಹಾದೇವಪ್ಪ ಇದ್ದರು.ಆದರೆ ಮುಂದಿನ ಚುನಾವಣೆಯಲ್ಲಿ ಸೋತು ಹೋದರು. ಒಂದು ಮನೆಗೆ ಇಷ್ಟೆಲ್ಲಾ ಇತಿಹಾಸ ಇದೆ ನೋಡಿ..

ಈಗ ಡಿಕೆ ಸಾಹೇಬ್ರಿಗೆ ಮೇ ಹೊತ್ತಿಗೆ ಗುರುಬಲ ಬರುತ್ತದಂತೆ, ಅದಕ್ಕೂ ಮುನ್ನ ಈ ಮನೆಗೆ ಬರಲಿದ್ದಾರೆ… ಮುಖ್ಯಮಂತ್ರಿ ಆದರೆ ಆ ಮನೆಗೂ ಒಳ್ಳೆ ಹೆಸರು ಬರ್ತದೆ.ಇಲ್ಲದಿದ್ದರೆ ಆ ಮನೆಯಲ್ಲಿ ಮೊದಲೇ ವಾಸವಿದ್ದ ಕಾರಣಕ್ಕೆ ಸಿದ್ದರಾಮಣ್ಣ ಮುಂದುವರೆಯಲೂಬಹುದು…. ಅಥವಾ ಮೈಸೂರಿನಲ್ಲಿ ಕಟ್ಟುತ್ತಿರುವ ಹೊಸಾ ಬಂಗ್ಲೆಗೆ.. ಶಿಫ್ಟ್ ಆಗ್ಬೋದು ಯಾಂಬಲ್ಲ………
ಲಾಸ್ಟ್ ಪಂಚ್ ;
ಏನಪ್ಪಾಂತಂದ್ರೆ ಸಿದ್ದರಾಮಣ್ಣಂಗೆ ಈ ಮನೆಯಲ್ಲಿ ವಾಸ ಮಾಡಲು ಹೇಳಿದ್ದೇ ರೇವಣ್ಣ ಅಂತೆ….. ಏನಂತೀರಾ… ಈಗಲೂ ಡಿಕೆಶಿಗೆ ಅವರೇ ಹೇಳಿರಬೋದಾ…. ಮನೆ, ಮನೆ ಕಥೆ ಮುಗಿಸೋ ಮುನ್ನ ನಿನ್ನೇ.. “ಮೋದಿಯವರು ನಿನ್ನ ಕೇಳಿದ್ರಪ್ಪ ….ಶಿವಕುಮಾರೂ ಡೆಲ್ಲಿಗ್ ಬಂದಿದಾರೆ ಅವರ ಕೆಲಸಾನೂ.ಮಾಡ್ಕೊಡಿ ಅಂತ ಹೇಳಿದೀನಿ “.. ಎಂದು ಪಕ್ಕದಲ್ಲೇ ಕುಳಿತಿದ್ದ ಡಿಕೆಶಿಗೆ ಸೀರಿಯಸ್ ಆಗಿ ಹೇಳಿದ್ದರಲ್ಲಿ ಯಾವುದೇ ಗೂಢಾರ್ಥ ಹುಡುಕಬೇಡಿ ಮತ್ತೆ….
ಡಿಕೆಶಿ ಮುಖದಲ್ಲೂ ಮಂದಹಾಸ ಇತ್ತಲ್ಲವಾ‌……ಮುಂದಕ್ಕೋಗಾಣ

More News

You cannot copy content of this page