Search

18 ತುಂಬುತ್ತಿರುವ ಸಮಯದಲ್ಲಿ ಮಗನಿಗೆ ತಂದೆಯೊಬ್ಬನ ಬುದ್ಧಿ ಮಾತುಗಳು……..

……………ವಿವೇಕಾನಂದ. ಎಚ್.ಕೆ.ಹಿರಿಯ ಪತ್ರಕರ್ತರು………….

ಕಂದ ನೀನು ಇಂದಿನಿಂದ 18 ವರ್ಷ ತುಂಬಿದ ಕಾರಣಕ್ಕಾಗಿ ಈ ದೇಶದ ಒಬ್ಬ ಪ್ರಜೆಯಾಗಿ ಗುರುತಿಸಿಕೊಳ್ಳಬೇಕಾಗಿದೆ. ಈ ದೇಶದ ಎಲ್ಲಾ ಹಕ್ಕು ಮತ್ತು ಕರ್ತವ್ಯಗಳು ನಿನಗೆ ದೊರೆಯುತ್ತದೆ. ಅಷ್ಟೇ ಅಲ್ಲ ನೀನು ಒಬ್ಬ ಜವಾಬ್ದಾರಿಯುತ ನಾಗರೀಕನು, ಮತದಾರರ ಸಹ ಆಗುತ್ತಿರುವೆ……

ಈ ಸಂದರ್ಭದಲ್ಲಿ ಒಬ್ಬ ತಂದೆಯಾಗಿ ನನಗೆ ಒಂದು ಕಡೆ ಹೆಮ್ಮೆ, ಇನ್ನೊಂದು ಕಡೆ ಆತಂಕವಾಗುತ್ತಿದೆ. ಮಗನೇ, ಈ 18 ವರ್ಷಗಳು ನೀನು ನನ್ನ ಕಣ್ಣಳತೆಯ ಮಿತಿಯಲ್ಲಿಯೇ ಬೆಳೆದಿರುವೆ. ಏಕೆಂದರೆ ಮಕ್ಕಳೆಂದರೆ ಅದು ತಂದೆ ತಾಯಿಯ ದೇಹದ ಮುಂದುವರಿದ ಭಾಗ. ಅದಕ್ಕೆ ಎಷ್ಟೇ ಪ್ರತ್ಯೇಕ ಅಸ್ತಿತ್ವವಿದ್ದರೂ ಮೂಲ ಮಾತ್ರ ತಂದೆ ತಾಯಿಯ ದೇಹದ ಮುಂದಿನ ಬೆಳವಣಿಗೆಯಾಗಿಯೇ ಗುರುತಿಸಲ್ಪಡುತ್ತದೆ ಮತ್ತು ಅದು ಅನುವಂಶಿಕವಾಗಿ ಬೆಳೆಯುತ್ತಿರುತ್ತದೆ……

ಇಂತಹ ಸಂದರ್ಭದಲ್ಲಿ ನೀನು ನನ್ನ ಮಗ ಎನ್ನುವುದಕ್ಕಿಂತ ಹೆಚ್ಚಾಗಿ ಇನ್ನು ಮುಂದೆ ನಿಮ್ಮ ಅಪ್ಪ ನಾನಾಗುತ್ತೇನೆ. ನಿನಗೆ ಯೌವ್ವನ ಚಿಗುರುತ್ತಾ ಸಾಗುತ್ತಿದ್ದರೆ, ನನಗೆ ಮುಪ್ಪು ಹತ್ತಿರವಾಗುತ್ತಾ ಇರುತ್ತದೆ. ನಿನ್ನ ಆರೋಗ್ಯ, ದೇಹ, ಮನಸ್ಸು ಬಲಿಷ್ಠವಾಗುತ್ತಿದ್ದರೆ, ನನ್ನ ದೇಹ, ಮನಸ್ಸು, ನಿಧಾನವಾಗಿ ಕುಸಿಯತೊಡಗುತ್ತದೆ. ನಿನ್ನ ನನ್ನ ವಯಸ್ಸಿನ ಅಂತರ ಕೇವಲ ಇಷ್ಟಕ್ಕೆ ನಿಲ್ಲುವುದಿಲ್ಲ. ಈ ನೆಲದ ಸಾಂಸ್ಕೃತಿಕ ವ್ಯಕ್ತಿತ್ವವು ಸಹ ನಮ್ಮಿಬ್ಬರ ಮಧ್ಯೆ ಸಾಕಷ್ಟು ಅಂತರವನ್ನು ಸೃಷ್ಟಿ ಮಾಡಿರುತ್ತದೆ. ನಿನ್ನ ಯೋಚನಾಲಹರಿ, ನನ್ನ ಯೋಚನೆ ಲಹರಿ ಸಾಕಷ್ಟು ಭಿನ್ನವಾಗಿರುವ ಎಲ್ಲ ಸಾಧ್ಯತೆಯೂ ಇರುತ್ತದೆ. ಇದು ವೈಯಕ್ತಿಕ ನಿಲುವುಗಳ ವ್ಯತ್ಯಾಸಗಳಾದರೆ, ಇನ್ನು ಸಾಮಾಜಿಕವಾಗಿ, ಆರ್ಥಿಕವಾಗಿ, ಪ್ರಾಕೃತಿಕವಾಗಿ ಸಾಕಷ್ಟು ವೈರುಧ್ಯಗಳು ನಮ್ಮ ನಡುವೆ ಏರ್ಪಟ್ಟಿದೆ…….

ಕಳೆದ 40/50 ವರ್ಷಗಳಿಗೆ ಹೋಲಿಸಿದರೆ ಗಾಳಿ, ನೀರು, ಆಹಾರ ಸಾಕಷ್ಟು ವಿಷಯುಕ್ತವಾಗಿದೆ. ಅದೇ ಸಮಯದಲ್ಲಿ ಮಾನವೀಯ ಮೌಲ್ಯಗಳು ದುರ್ಬಲವಾಗಿದೆ ಅಥವಾ ವ್ಯಾಪಾರಿಕರಣವಾಗಿದೆ. ಮನುಷ್ಯ ಸಂಬಂಧಗಳು ಮೊದಲಿನಷ್ಟು ಆಳ ಮತ್ತು ಗಟ್ಟಿತನವನ್ನು ಹೊಂದಿಲ್ಲ. ಬದುಕು ಎಂದಿನಂತೆ ಸರಳವಾಗಿಲ್ಲ, ಸಂಕೀರ್ಣವಾಗಿದೆ. ಅವಕಾಶಗಳು, ವೇದಿಕೆಗಳು ಸಂಪರ್ಕಗಳು ಹಿಂದಿನಂತಿಲ್ಲ. ಅದು ಸಾಕಷ್ಟು ಸಾಧ್ಯತೆಗಳನ್ನು ನಿನಗೆ ಕೊಡುತ್ತಿದೆ. ತಂತ್ರಜ್ಞಾನ, ಆಧುನಿಕತೆ ವೇಗವಾಗಿ ಬೆಳೆಯುತ್ತಿದೆ…..

ಇಂತಹ ಸನ್ನಿವೇಶದಲ್ಲಿ ನನ್ನ ಸಲಹೆಗಳು ನಿನಗೆ ಮಾರ್ಗದರ್ಶನವೂ ಆಗಬಹುದು ಅಥವಾ ನಿಯಂತ್ರಿತ ಮಿತಿಗಳು ಆಗಬಹುದು. ಏಕೆಂದರೆ ನನ್ನ ಸಲಹೆಗಳು ನೀನು ನನ್ನ ಮಗ ಎನ್ನುವ ಒಂದು ಮಿತಿಗೆ ಒಳಪಟ್ಟರೆ, ನನಗಾದ ಅನುಭವಗಳು ನಿನ್ನ ಮೇಲೆ ಹೇರಿಕೆಯೂ ಆಗಬಹುದು. ಆದರೂ ತಂದೆ ಎನ್ನುವ ಜವಾಬ್ದಾರಿ ಅರಿತು ಸಾಧ್ಯವಾದಷ್ಟು ನಿನ್ನ ಮನಸ್ಥಿತಿ, ಪರಿಸ್ಥಿತಿಯನ್ನ ಅರಿತು ಕೆಲವು ಸಲಹೆಗಳನ್ನು ಕೊಡಲು ಇಚ್ಚಿಸುತ್ತೇನೆ……..

ಈ ವಯಸ್ಸಿನಲ್ಲಿ ಅದು ನಿನಗೆ ಅರ್ಥವಾಗಬಹುದು ಅಥವಾ ಅರ್ಥವಾಗದೆಯೂ ಇರಬಹುದು. ಅದನ್ನು ನೀನು ಸ್ವೀಕರಿಸಬಹುದು ಅಥವಾ ತಿರಸ್ಕರಿಸಬಹುದು ಅಥವಾ ನಿರ್ಲಕ್ಷಿಸಿಬಹುದು. ಆದರೂ ಮುಂದಿನ ದಿನಗಳಲ್ಲಿ ಈ ಸಲಹೆಗಳು ನಿನ್ನ ಉಪಯೋಗಕ್ಕೆ ಬರಬಹುದು ಎಂಬ ಭರವಸೆಯೊಂದಿಗೆ ಹೇಳುತ್ತಿದ್ದೇನೆ……

ಕಂದ, ನನ್ನ ಅಪ್ಪನ ಕಾಲಕ್ಕೆ ಸ್ವಾತಂತ್ರ್ಯ ಆಗತಾನೇ ಬಂದಿತ್ತು. ಅವರಿಗೆ ಕೇವಲ ಏಳು ರೂಪಾಯಿ ಸರ್ಕಾರಿ ಶಿಕ್ಷಕ ವೃತ್ತಿ ಸಿಕ್ಕಿತ್ತು. ನಮ್ಮ ಮನೆಯ ಬಾಡಿಗೆ ಎರಡು ರೂಪಾಯಿಗಳು. ಮಳೆ ಬಂದಾಗ ಮನೆ ತುಂಬಾ ನೀರು ಸೋರುತಿತ್ತು. ಆಗಾಗ ಹಾವು ಚೇಳುಗಳು ಮನೆಯೊಳಗೆ ನುಗ್ಗುತ್ತಿದ್ದವು. ನಮ್ಮ ಸ್ಥಳೀಯ ಆಹಾರದಂತೆ ಮುದ್ದೆಯೆ ನಮ್ಮ ದಿನನಿತ್ಯದ ಹಸಿವನ್ನು ತುಂಬಿಸುತ್ತಿದ್ದ ಭಕ್ಷ ಭೋಜನ. ಆಗಿನ ಕಾಲಕ್ಕೆ ಹಬ್ಬದಲ್ಲಿ ಅನ್ನ ತಿನ್ನುವುದು ಎಂಬುದು ಒಂದು ಗಾದೆ ಮಾತಾಗಿತ್ತು. ಸಿಹಿ ಅಥವಾ ಮಾಂಸಹಾರ ತೀರಾ ಅಪರೂಪ ಮತ್ತು ಅದೇ ಒಂದು ದೊಡ್ಡ ಸಂಭ್ರಮ. ಹೊಸ ಬಟ್ಟೆಗಳು ಯುಗಾದಿ ಹಬ್ಬಕ್ಕೆ ಮಾತ್ರವೇ ಸಿಗುತ್ತಿತ್ತು. ಸ್ನಾನ ಬಹುತೇಕ ವಾರಕ್ಕೆ ಒಂದು ದಿನ, ಅದು ಸಹ ಶನಿವಾರವೇ ಆಗಿರುತ್ತಿತ್ತು.. ಮನೆಯ ಎಲ್ಲರೂ ಒಂದೇ ಚಾಪೆಯಲ್ಲಿ ಒಂದೇ ಕಂಬಳಿಯನ್ನು ಹೊಂದು ಮಲಗುತ್ತಿದ್ದೆವು…….

ಹಸಿವೆಂಬುದು ಸದಾ ಕಾಡುತ್ತಿತ್ತು. ಏಕೆಂದರೆ ಆಗಿನ ದೈಹಿಕ ಚಟುವಟಿಕೆಗೆ ಮನೆಯಲ್ಲಿ ಮಾಡುತ್ತಿದ್ದ ಆಹಾರ ಅಥವಾ ಶಾಲೆಯಲ್ಲಿ ಕೊಡುತ್ತಿದ್ದ ಉಪ್ಪಿಟ್ಟು ಸಾಕಾಗುತ್ತಿರಲಿಲ್ಲ. ಎಲ್ಲೋ ಮದುವೆಯೋ ಅಥವಾ ಊರಿನ ಜಾತ್ರೆಯೋ ನಡೆದರೆ ಅಲ್ಲಿ ಸಿಗುತ್ತಿದ್ದ ಆಹಾರವೇ ನಮಗೆ ಮೃಷ್ಟಾನ್ನ…..

ಆಗ ನಮ್ಮ ತಂದೆಯವರ ಆದ್ಯತೆ ನಮ್ಮ ಮಕ್ಕಳನ್ನ ಕನಿಷ್ಠ ಎಸ್ ಎಸ್ ಎಲ್ ಸಿ ಅಥವಾ ಪಿಯುಸಿ ಸಾಧ್ಯವಾದರೆ ಒಂದು ಪದವಿಯನ್ನು ಮಾಡಿಸಿ, ಏನಾದರೂ ಸರ್ಕಾರಿ ಉದ್ಯೋಗ ಸಿಕ್ಕಿ, ಮಗ ನಗರದಲ್ಲಿ ಸ್ವತಂತ್ರ ಜೀವನ ಸಾಗಿಸಿದರೆ ಸಾಕು ಎಂದು ತುಂಬಾ ಆಸೆ ಪಡುತ್ತಿದ್ದರು. ಕೃಷಿ ಅಥವಾ ಖಾಸಗಿ ವ್ಯವಹಾರ ಅಷ್ಟೇನೂ ಲಾಭದಾಯಕವಾಗಿರಲಿಲ್ಲ. ಅದರಿಂದ ಇವನ ಬದುಕು ಸಾಗುವುದು ಕಷ್ಟ. ಸರ್ಕಾರಿ ಉದ್ಯೋಗ ದೊರಕಿದರೆ ಜೀವನಕ್ಕೆ ಶಾಶ್ವತವಾಗಿ ಒಂದು ದಾರಿ ಆಗುತ್ತದೆ ಎಂಬ ಆಸೆ ಅವರದಾಗಿತ್ತು….

ಮಗನೇ ಈಗ ಕಾಲ ಅಥವಾ ಸಾಮಾಜಿಕ ವಾತಾವರಣ ಸಂಪೂರ್ಣ ಬದಲಾಗಿದೆ. ಅಂದು ನಾನು ನಗರಕ್ಕೆ ಬಂದು ಸಾಕಷ್ಟು ಸಂಘರ್ಷಗಳ ನಡುವೆ ಪ್ರತಿಕ್ಷಣ ಶ್ರಮ ಪಡುತ್ತಾ ಜವಾಬ್ದಾರಿಯಿಂದ ಬದುಕು ನಿರ್ವಹಿಸಲು ತುಂಬಾ ಕಷ್ಟವಾಯಿತು. ಹೇಗೋ ಒಂದು ಹಂತ ತಲುಪಿದ ಮೇಲೆ ನೀನು ಜನಿಸಿದೆ. ಆಗ ನನ್ನೆಲ್ಲಾ ಕಷ್ಟಗಳು ನಿನಗೆ ಬಾಧಿಸದಿರಲೆಂದು ನಿನ್ನನ್ನು ಹೆಚ್ಚು ಪ್ರೀತಿಯಿಂದ ಯಾವುದೇ ನೋವಾಗದಂತೆ, ನೀನು ಕಷ್ಟ ಪಡದಂತೆ ಸಾಕಬೇಕೆಂದು ಬಯಸಿ ಹಾಗೆಯೇ ನೋಡಿಕೊಳ್ಳುತ್ತಿದ್ದೆ. ನೀನು ಗಣಿತದ ಲೆಕ್ಕಗಳು ಹೇಳು, ನಾನು ಕೂಡಿ ಕಳೆದು ಗುಣಿಸುವುದು ಮಾಡುತ್ತೇನೆ ಎಂದಾಗ, ನಾನು ಅತ್ಯಂತ ಸರಳ ಸಂಖ್ಯೆಗಳನ್ನು ಕೊಡುತ್ತಿದ್ದೆ. ಏಕೆಂದರೆ ಸಂಕೀರ್ಣ ಸಂಖ್ಯೆಗಳನ್ನು ನೀಡಿದರೆ ನೀನು ಎಲ್ಲಿ ಕಷ್ಟ ಪಡುತ್ತಿಯೋ ಎನ್ನುವಷ್ಟು ತೀವ್ರವಾಗಿ ನಿನ್ನನ್ನು ಪ್ರೀತಿಸುತ್ತಿದ್ದೆ……

ಆದರೆ ಜಾಗತೀಕರಣದ ನಂತರ ಬದುಕು ಅಷ್ಟು ಸುಲಭವಾಗಿ ಮುನ್ನಡೆಯಲು ಸಾಧ್ಯವಾಗುತ್ತಿಲ್ಲ. ಅನೇಕ ಎರಡು ತೊಡರುಗಳು, ಆರ್ಥಿಕ ಸಂಕಷ್ಟಗಳು ನನ್ನನ್ನು ಕಾಡಲು ಪ್ರಾರಂಭಿಸಿದೆ. ಇಂತಹ ಸಂದರ್ಭದಲ್ಲಿ ನೀನು ಈಗಿನ ಸಾಮಾಜಿಕ ಪರಿಸ್ಥಿತಿಯಲ್ಲಿ ದೊಡ್ಡ ದೊಡ್ಡ ಕನಸುಗಳನ್ನು, ಯಶಸ್ಸನ್ನು ಬಯಸುತ್ತಿರುವೆ. ನನ್ನ ದೃಷ್ಟಿಕೋನದ ಯಶಸ್ಸಿಗೂ, ನಿನ್ನ ದೃಷ್ಟಿಕೋನದ ಯಶಸ್ಸಿಗೂ ಸಾಕಷ್ಟು ವ್ಯತ್ಯಾಸ ಇದೆ. ಕೇವಲ ವೈಯಕ್ತಿಕ ನೆಲೆಯಲ್ಲಿ ಮಾತ್ರವಲ್ಲ ಸಾಮಾಜಿಕವಾಗಿ ಸಹ ಇಂದು ವಸ್ತು ಸಂಸ್ಕೃತಿ, ಕೊಳ್ಳುಬಾಕ ಸಂಸ್ಕೃತಿ, ಹೋಲಿಕೆಯ ಸಂಸ್ಕೃತಿ, ಅಪ ಮೌಲ್ಯಗೊಂಡ ಸಂಸ್ಕೃತಿ, ನಿನ್ನನ್ನು ಅಕ್ರಮಿಸಿಕೊಂಡಿವೆ. ಕಾಲದ ಪಯಣದಲ್ಲಿ ಈ ಬದಲಾವಣೆಗಳು ಸಹಜವೇನೋ ನಿಜ. ಆದರೆ ಆ ಬದಲಾವಣೆಗಳು ನಿನ್ನ ಭವಿಷ್ಯವನ್ನು ಮುಸುಕಾಗಿಸಬಹುದು, ಈ ವ್ಯವಸ್ಥೆ ಇನ್ನೂ ಸಂಕೀರ್ಣ ಸಂಘರ್ಷಮಯವಾಗಿ ನಿನ್ನ ನೆಮ್ಮದಿಯನ್ನು ಕಸಿದುಕೊಳ್ಳಬಹುದು, ನಿನ್ನ ಆರೋಗ್ಯವನ್ನು ಹಾಳುಮಾಡಬಹುದು ಎಂಬ ಆತಂಕ ಇರುವುದಂತೂ ನಿಜ……

ಬಹುಶಃ ಹಿಂದೆ ನಮ್ಮ ತಂದೆ ತಾಯಿಗಳು ಇದೇ ರೀತಿ ಆತಂಕ ಪಟ್ಟಿರಬಹುದು. ಮುಂದಿನ ಭವಿಷ್ಯ ಹೇಗಾಗುತ್ತದೋ ತಿಳಿದಿಲ್ಲ. ಆದರೆ ಈ ಕ್ಷಣದಲ್ಲಿ ಯೋಚಿಸಿದಾಗ ಮುಂದಿನ ದಿನಗಳು ನೀನು ತಿಳಿದಿರುವುದಕ್ಕಿಂತ ಹೆಚ್ಚು ಸವಾಲುಗಳನ್ನು ನೀಡಬಹುದು ಎಂದು ಅನಿಸುತ್ತಿದೆ. ಮಗನೇ, ಇಂದು ಜಗತ್ತು ತುಂಬಾ ಸ್ಪರ್ಧಾತ್ಮಕವಾಗಿದೆ. ಹಾಗೆಯೇ ಮನುಷ್ಯ ಸಂಬಂಧಗಳು ಶಿಥಿಲವಾಗಿ, ಹಣ ಕೇಂದ್ರೀಕೃತವಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಇದರಿಂದಾಗಿ ದೇಹ, ಮನಸ್ಸುಗಳು ಸಾಕಷ್ಟು ಒತ್ತಡಕ್ಕೆ ಸಿಲುಕುತ್ತವೆ. ಬಹುತೇಕ ಯಶಸ್ಸಿಗಿಂತ ನಿರಾಸೆಗಳು, ಅಸಹಾಯಕತೆಗಳೇ ಮನೆಮಾಡುತ್ತವೆ…..

ಸಾಮೂಹಿಕ ಯಶಸ್ಸನ್ನು ಯಾರು ಬಯಸುತ್ತಿಲ್ಲ. ಕೆಲವೇ ಕೆಲವರ ವೈಯಕ್ತಿಕ ಯಶಸ್ಸು ಸಮಾಜದಲ್ಲಿ ಅಂತರವನ್ನು ಹೆಚ್ಚಿಸುತ್ತಿದೆ. ಹಂಚಿಕೊಂಡು ತಿನ್ನುವ ಪರಿಸ್ಥಿತಿ ಮಾಯವಾಗಿ ಕಿತ್ತುಕೊಂಡು ತಿನ್ನುವ ಅನಾಗರಿಕ ವರ್ತನೆಗಳು ಸಮಾಜದಲ್ಲಿ ಸಹಜವಾಗುತ್ತಿವೆ. ಇಂತಹ ಸನ್ನಿವೇಶದಲ್ಲಿ ನಾನು ಗೊಂದಲಕ್ಕೆ ಒಳಗಾಗಿದ್ದೇನೆ……

ಒಳ್ಳೆಯದು ಒಳ್ಳೆಯದಾಗಿಯೇ ಇಲ್ಲದಿರುವಾಗ, ಒಳ್ಳೆಯವರು ಬದುಕುವುದೇ ಕಷ್ಟವಾಗುತ್ತಿರುವಾಗ, ಕೆಟ್ಟವರು ಸಮಾಜದಲ್ಲಿ ವಿಜೃಂಭಿಸುತ್ತಿರುವಾಗ, ಕೆಟ್ಟವರೇ ಜನಪ್ರಿಯತೆ, ವ್ಯಾವಹಾರಿಕ ಯಶಸ್ಸನ್ನು ಪಡೆಯುತ್ತಿರುವಾಗ, ಅದರ ಸಂಪೂರ್ಣ ವಿವರಗಳು ನನಗೆ ಸ್ಪಷ್ಟವಾಗಿ ತಿಳಿದಿರುವಾಗ, ನಾನು ನಿನಗೆ ಏನೆಂದು ಮಾರ್ಗದರ್ಶನ ಮಾಡಬೇಕು. ಸತ್ಯ, ಪ್ರಾಮಾಣಿಕ, ನಿಷ್ಠೆ, ಮಾನವಿಯ ಮೌಲ್ಯಗಳನ್ನು ನಿನಗೆ ಭೋದಿಸಬೇಕೇ ಅಥವಾ ಸಾಂದರ್ಭಿಕವಾಗಿ ಏನನ್ನಾದರೂ ಮಾಡಿ ಜೀವನದಲ್ಲಿ ಯಶಸ್ಸನ್ನು ಪಡೆ ಎಂದು ಹೇಳಬೇಕೇ ಈ ಎರಡರ ನಡುವೆ ನನಗೂ ಗೊಂದಲಗಳಿವೆ…..

ಏಕೆಂದರೆ ಒಳ್ಳೆಯದನ್ನು ಹೇಳುವುದು ತುಂಬಾ ಸುಲಭ. ಆದರೆ ಅದನ್ನು ಅನುಸರಿಸುವ ಮನಸ್ಥಿತಿ ನಿನ್ನದಾಗಿದ್ದರೆ ತುಂಬಾ ಸಂತೋಷ. ಇಲ್ಲದಿದ್ದರೆ ಆ ಸೂತ್ರಗಳು ನಿನ್ನ ಅಪ ಯಶಸ್ಸಿಗೆ ಕಾರಣವಾಗಿ ಅದರ ಹೊಣೆಗಾರ ನಾನಾಗುತ್ತೇನೇನೋ ಎನ್ನುವ ಅಳುಕು ಸಹ ನನಗಿದೆ. ಅಂದಿನ ಆ ಸಾಮಾಜಿಕ ವಾತಾವರಣ ಮಾಯವಾಗಿದೆ. ಸಕ್ಸಸ್ ಅಟ್ ಎನಿಕಾಸ್ಟ್ ಎನ್ನುವ ಸೂತ್ರ ಈಗ ಚಲಾವಣೆಯಲ್ಲಿದೆ. ಒಳ್ಳೆಯ ಮಾರ್ಗದಲ್ಲಿ ಯಶಸ್ವಿಯಾಗಿ ಮುನ್ನಡೆ ಎಂದು ಧೈರ್ಯವಾಗಿ ಹೇಳುವ ಸ್ಥಿತಿಯಲ್ಲಿ ನಾನಿಲ್ಲ. ಹಾಗೆಂದು ಕೆಟ್ಟವನಾಗು ಎನ್ನುವುದು ಮತ್ತಷ್ಟು ತಪ್ಪಾಗುತ್ತದೆ….

ಮಗನೇ ನಾನೇನೋ ವ್ಯಾವಹಾರಿಕ ಜಗತ್ತಿನಿಂದ ಹೊರಬಂದು ಸಾಮಾಜಿಕ ಪರಿವರ್ತನೆಗಾಗಿ ಯಾವ ನಿರೀಕ್ಷೆಯು ಇಲ್ಲದೆ ಕೆಲಸ ಮಾಡುತ್ತಿದ್ದೇನೆ. ಹಾಗೆಂದು ನಿನ್ನನ್ನು ನಿರ್ಲಕ್ಷಿಸಲು ಸಾಧ್ಯವಾಗುತ್ತಿಲ್ಲ ಅಥವಾ ನಿನಗಾಗಿಯೇ ನನ್ನ ಬದುಕನ್ನು ಸವೆಸಲು ಸಾಧ್ಯವಾಗುತ್ತಿಲ್ಲ. ನನ್ನ ಮಗ ಮತ್ತು ಈ ಸಮಾಜದ ಆಯ್ಕೆಯಲ್ಲಿ ಅನಿವಾರ್ಯವಾಗಿ ಸಮಾಜವನ್ನೇ ಆಯ್ಕೆ ಮಾಡಿಕೊಂಡಿದ್ದೇನೆ. ಇದರ ನಡುವೆ ನಿನ್ನನ್ನು ಸರಿಯಾಗಿ ಬೆಳೆಸದ ಆರೋಪ ನನ್ನ ಮೇಲೆ ಸಹಜವಾಗಿಯೇ ಬರುತ್ತದೆ…..

ಒಬ್ಬ ಮಗನಿಗಾಗಿ ಹೆಚ್ಚು ಶ್ರಮಪಡಲು ಅಥವಾ ಮಗನ ಬದುಕನ್ನು ನಿರ್ಲಕ್ಷಿಸಿ ಅಥವಾ ಸವಾಲಿಗೆ ಒಡ್ಡಿ ಇಡೀ ಸಮಾಜದ ಪರಿವರ್ತನೆಗಾಗಿ ಪ್ರಯತ್ನಿಸುವ ಆಯ್ಕೆಯಲ್ಲಿ ಸಮಾಜವನ್ನೇ ಆಯ್ಕೆ ಮಾಡಿಕೊಂಡಿರುವ ಬಗ್ಗೆ ನನಗೆ ಆತ್ಮ ತೃಪ್ತಿ ತಂದಿದೆ. ಇದರ ನಡುವೆ ನೀನು 18 ದಾಟುತ್ತಿದ್ದೀಯಾ. ನಿನ್ನ ಬೇಡಿಕೆಗಳು ಇಂದಿನ ಎಲ್ಲ ಸಾಮಾನ್ಯ ಯುವ ಜನಾಂಗದಂತೆ ಸಾಕಷ್ಟು ಕನಸುಗಳನ್ನು ಹೊಂದಿವೆ. ಕರುಳ ಬಳ್ಳಿಯ ಮೂಲೆಯಲ್ಲಿ ನಿನ್ನ ಆಸೆಗಳಿಗೆ ಸ್ಪಂದಿಸಬೇಕೆಂದು ಸಾಕಷ್ಟು ಮನಸ್ಸು ಕಾಡುತ್ತದೆ. ಅದಕ್ಕಾಗಿ ಸಣ್ಣ ಪ್ರಯತ್ನಗಳು ಇದೆ. ಆದರೆ ಅದನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಅದಕ್ಕಾಗಿ ಕ್ಷಮೆ ಇರಲಿ……

ಹೇಳಲು ಇನ್ನೂ ಸಾಕಷ್ಟು ಇದೆ. ಆದರೆ ನನ್ನ ಬುದ್ಧಿಮಾತುಗಳು ಇವತ್ತಿಗೆ ಮಾತ್ರ ಮುಗಿಯುವುದಿಲ್ಲ. ಅದು ನಿರಂತರ. ಕೊನೆಯದಾಗಿ ಒಂದು ಕಿವಿಮಾತು ಮಗನೇ, ನೀನು ಸುಖವಾಗಿ, ನೆಮ್ಮದಿಯಿಂದ, ಸಂತೋಷವಾಗಿ ಇರುವಾಗ ನನ್ನ ನೆನಪಾಗದಿದ್ದರೂ ಚಿಂತೆ ಇಲ್ಲ. ನನ್ನ ಮುಪ್ಪಿನ ಸಮಯದಲ್ಲಿ ನೀನು ನನಗೆ ನೆರವಾಗದಿದ್ದರೂ ಪರವಾಗಿಲ್ಲ. ಆದರೆ ನಿನ್ನ ಸಂಕಷ್ಟದ ಸಮಯದಲ್ಲಿ. ನಿನ್ನ ನೋವಿನ ಸಂದರ್ಭದಲ್ಲಿ, ನನ್ನ ನೆನಪಾದರೆ ಅಷ್ಟೇ ಸಾಕು. ನಾನು ಬದುಕಿದ್ದರೆ ನಿನಗೆ ಸಹಾಯವನ್ನು, ಸಲಹೆ ಸೂಚನೆಯನ್ನು ನೀಡುತ್ತೇನೆ. ಇಲ್ಲದಿದ್ದರೆ ನನ್ನ ಈ ತಿಳುವಳಿಕೆಯ ಮಾತುಗಳಾದರು ನಿನಗೆ ನೆನಪಾಗಲಿ….

ಒಳ್ಳೆಯದಾಗಲಿ ಮಗ…..

More News

You cannot copy content of this page